ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮಕ್ಕೆ ಸಂಬಂಧಪಟ್ಟ ಆರೋಪಿ ರುದ್ರಗೌಡ ಪಾಟೀಲ್‌ಗೆ (ಆರ್.ಡಿ. ಪಾಟೀಲ್) ಮನೆ ನೀಡಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ವರದಾ ಲೇಔಟ್ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಮಾಲೀಕ ಹಾಗೂ ವ್ಯವಸ್ಥಾಪಕ ಬಂಧಿತರು.
ಯಾದಗಿರಿ ಜಿಲ್ಲೆಯ ಶಹಾಪೂರದ ಶಂಕರ್ ಗೌಡ ಯಾಳವಾರ್, ಆರ್.ಡಿ.ಪಾಟೀಲ್‌ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಬಂಧನಕ್ಕೊಳಗಾದ ಮಾಲೀಕನಾಗಿದ್ದು, ಅದೇ ರೀತಿ ಅಪಾರ್ಟ್ಮೆಂಟ್ನ ವ್ಯವಸ್ಥಾಪಕ ದಿಲೀಪ್ ಪವಾರ್ನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಕ್ಟೋಬರ್ 28 ಮತ್ತು 29ರಂದು ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಾಗಿ ಪರೀಕ್ಷೆ ನಡೆಸಿತ್ತು. ಮೊದಲ ದಿನ ನಡೆದ ಎಫ್ಡಿಎ ಪರೀಕ್ಷೆ ವೇಳೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿರುವುದು ಬಯಲಾಗಿತ್ತು. ಪ್ರಕರಣದ ಹಿಂದೆ ಆರ್.ಡಿ ಪಾಟೀಲ್ ಕೈವಾಡ ಇರುವ ಬಗ್ಗೆ ಬಂಧಿತ ಅಭ್ಯರ್ಥಿಗಳು ಬಾಯ್ಬಿಟ್ಟಿದ್ದರು.
ಅಂದಿನಿಂದ ಪೊಲೀಸರ ಕಣ್ತಪ್ಪಿಸಿ ಆರ್‌ಡಿ ಪಾಟೀಲ್ ಓಡಾಡುತ್ತಿದ್ದಾನೆ. ಹೊರಗಿನಿಂದಲೇ ಜಾಮೀನು ಪಡೆಯುವ ಯತ್ನ ಮಾಡುತ್ತಿದ್ದಾನೆ. ಆದjz ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ. ಈ ನಡುವೆ ಆರ್.ಡಿ.ಪಾಟೀಲ್ ಕಲಬುರಗಿಯ ವರದಾ ಲೇಔಟ್ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಕಳೆದ 6ನೇ ತಾರೀಖು ಬಂಧಿಸಲು ತೆರಳಿದ್ದರು. ಆದರೆ ಪೊಲೀಸರು ಅಪಾರ್ಟ್‌ಮೆಂಟ್ ತಲುಪುವ ಮುನ್ನವೇ ಬಂಧನ ಸುಳಿವು ಪಡೆದ ಆರ್.ಡಿ.ಪಾಟೀಲ್ ಹಿಂಬದಿಯ ಕಂಪೌಂಡ್ ಜಿಗಿದು ಪರಾರಿಯಾಗಿದ್ದನು. ಕಂಪೌಂಡ್ ಹಾರಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರ್.ಡಿ.ಪಾಟೀಲ್‌ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಫ್ಲ್ಯಾಟ್ ಮಾಲೀಕ ಮತ್ತು ಅಪಾರ್ಟ್‌ಮೆಂಟ್ ವ್ಯವಸ್ಥಾಪಕನ ಬಂಧನವಾಗಿದೆ. ಆರ್.ಡಿ.ಪಾಟೀಲ್ನಿಂದ ಹತ್ತು ಸಾವಿರ ರೂ. ಅಡ್ವಾನ್ಸ್ ಪಡೆದು, ಆ ಹಣವನ್ನು ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ವ್ಯವಸ್ಥಾಪಕ ದಿಲೀಪ್ ಕೊಟ್ಟಿದ್ದನಂತೆ. ಅಲ್ಲಿ ಹೆಸರು ಕೂಡಾ ಬಸವರಾಜ ಅಂತ ಸುಳ್ಳು ಹೇಳಿದ್ದ ಎನ್ನಲಾಗಿದೆ. ನವೆಂಬರ್ 5 ರಂದು ರಾತ್ರಿ 11 ಗಂಟೆಗೆ ಮಹಾಲಕ್ಷ್ಮೀ ಅಪಾರ್ಟ್ಮೆಂಟ್ಗೆ ಆಗಮಿಸಿ ರಾತ್ರಿ ಅಲ್ಲಿಯೇ ಅಡಗಿದ್ದ. ಮರುದಿನ ಮಧ್ಯಾಹ್ನ ಪೊಲೀಸರು ಆಗಮಿಸುವ ಮಾಹಿತಿ ಸಿಕ್ಕ ತಕ್ಷಣ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ತೆಲೆ ಮರೆಸಿಕೊಂಡಿರುವ ಆರ್.ಡಿ.ಪಾಟೀಲ್ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ನಾಲ್ವರು ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡ ರಚನೆ ಮಾಡಿ ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಮಿನಿ ಡ್ರಗ್ಸ್ ಫ್ಯಾಕ್ಟರಿ! ನೈಜೀರಿಯಾ ವ್ಯಕ್ತಿ ಬಂಧನ