ಕಲಬುರಗಿ: ಭೀಮಾ ನದಿ ಪ್ರವಾಹ ಸಂತ್ರಸ್ತರ ನೆರವಿಗೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾ ಆಶ್ರಮ ಮುಂದಾಗಿವೆ.
ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಗ್ರಾಮಗಳಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಆರು ಲಾರಿಗಳಲ್ಲಿ ಆಹಾರ ಧಾನ್ಯ, ಬಟ್ಟೆ, ಹಾಸಿಗೆ, ಹೊದಿಕೆ, ಗೃಹೋಪಯೋಗಿ ಸಲಕರಣೆ ಇತ್ಯಾದಿಗಳನ್ನು ವಿತರಿಸಲಾಗುತ್ತಿದೆ.
ಕರ್ನಾಟಕದ ಜೊತೆಗೆ ಮಹಾರಾಷ್ಟ್ರದಲ್ಲಿಯೂ ನೆರೆಯಿಂದ ಸಮಸ್ಯೆಯಾಗಿದ್ದು, ಸೋಲಾಪುರ ಜಿಲ್ಲೆಯಲ್ಲಿ ಒಂದು ಸಾವಿರ ಸಂತ್ರಸ್ತರಿಗೆ ಆಹಾರಧಾನ್ಯ ವಿತರಿಸಲು ನಿರ್ಧರಿಸಲಾಗಿದೆ ಎಂದು ರಾಮಕೃಷ್ಣ ಸೇವಾ ಆಶ್ರಮದ ಸ್ವಾಮಿ ಜಪಾನಂದ ತಿಳಿಸಿದ್ದಾರೆ.