ಕಲಬುರಗಿ: ಕೊರೊನಾ ಸೋಂಕಿಗೆ ದೇಶದಲ್ಲಿ ಮೊದಲನೇ ಬಲಿಯಾದ ಜಿಲ್ಲೆಯೆಂಬ ಅಪಖ್ಯಾತಿಗೆ ಒಳಗಾದ ಜಿಲ್ಲೆಯಲ್ಲಿ ಕೊರೊನಾ ರುದ್ರತಾಂಡವ ಮುಂದುವರೆದಿದೆ. ಸೋಂಕಿನಿಂದ ಮೃತಪಡುವವರ ಸಂಖ್ಯೆ ಏರುತ್ತಲೇ ಇದೆ. ಆದರೆ ಇದೇ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರ ನಿರಂತರ ಪ್ರಯತ್ನದಿಂದ ನಾಲ್ಕು ಗ್ರಾಮಗಳು ಕೊರೊನಾ ಮುಕ್ತ ಗ್ರಾಮಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.
ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ನಗರಗಳಿಗಿಂತ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ. ಆದರೆ ಜಿಲ್ಲೆಯ ಕಾಳಗಿ ತಾಲೂಕಿನ ಕಂದಗೂಳ ಗ್ರಾ.ಪಂ ವ್ಯಾಪ್ತಿಯ ಕಂದಗೂಳ, ಹುಳಗೇರಿ, ವಟವಟಿ ಹಾಗೂ ವಟವಟಿ ತಾಂಡಾ ಈ ನಾಲ್ಕು ಗ್ರಾಮಗಳಲ್ಲಿ ಕೊರೊನಾ ಅನ್ನೋದು ಇಲ್ಲವೇ ಇಲ್ಲ.
ಕಂದಗೂಳ ಗ್ರಾ.ಪಂ. ವ್ಯಾಪ್ತಿಯ ನಾಲ್ಕು ಗ್ರಾಮ ಸೇರಿ ಸುಮಾರು 10 ಸಾವಿರ ಜನರು ವಾಸವಿದ್ದಾರೆ. ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣ ಕಡೆಗೆ ದುಡಿಯಲು ಗೂಳೆ ಹೋಗಿದ್ದ ಜನ ಕೂಡ ಗ್ರಾಮಗಳಿಗೆ ವಾಪಸಾಗಿದ್ದಾರೆ. ಆದರೂ ನಾಲ್ಕು ಗ್ರಾಮಗಳಲ್ಲಿ ಸೋಂಕಿತರು ಇಲ್ಲ. ಪಂಚಾಯಿತಿಯ ವಿಶೇಷ ಕಾಳಜಿಗೆ ಕೈ ಜೊಡಿಸಿದ ಗ್ರಾಮಸ್ಥರು ಸ್ವಯಂ ಪ್ರೇರಿತ ನಿಷೇಧ ಹೇರಿಕೊಂಡಿದ್ದಾರೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ 14 ದಿನ ಹೋಮ್ ಕ್ವಾರಂಟೈನ್ ಫಿಕ್ಸ್ ಮಾಡಿದ್ದಾರೆ.
ಎರಡು ದಿನಕ್ಕೊಮ್ಮೆ ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತಃ ಕಂದಗೂಳ ಗ್ರಾ.ಪಂ. ಅಧ್ಯಕ್ಷ, ಸದಸ್ಯರು, ಪಿಡಿಒ ಮತ್ತು ಸಿಬ್ಬಂದಿ ಮನೆ ಮನೆ ಬಾಗಿಲಿ ಹೋಗಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಮನೆಗಳಲ್ಲಿ ಮದುವೆ ಸಮಾರಂಭಗಳು ಇದ್ದಲ್ಲಿ ಅಂತಹ ಮನೆಗಳಿಗೆ ತೆರಳಿ ಜನ ಸೇರಿಸದೆ ಮನೆಯವರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಲಹೆ ನೀಡುತ್ತಿದ್ದಾರೆ. ಸಮಾರಂಭದಲ್ಲಿ ಭಾಗಿಯಾಗುವ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಧರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಸೋಂಕಿನ ಲಕ್ಷಣಗಳು ಯಾರಿಗಾದರೂ ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತಿದ್ದು, ನಿತ್ಯ ಗ್ರಾಮದ ಮನೆ ಮನೆಗೆ ತೆರಳಿ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ರಿನಿಂಗ್ನಿಂದ ಆರೋಗ್ಯ ಸ್ಥಿರತೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಸೋಂಕು ಶಂಕಿತರಿಗೆ ತಕ್ಷಣ ಆರ್‌ಟಿಪಿಸಿಆರ್ ತಪಾಸಣೆಗೆ ಒಳಪಡಿಸಿ ತೀವ್ರ ನಿಗಾ ವಹಿಸಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಹಾಕಿಕೊಳ್ಳಲು ಪ್ರಚೋಧಿಸಲಾಗುತ್ತಿದೆ. ಗ್ರಾಮ ಪಂಚಾಯತಿಯೊಂದಿಗೆ ಕೈಜೊಡಿಸಿದ ನಾಲ್ಕು ಗ್ರಾಮದ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಎಚ್ಚರಿಕೆ ವಹಿಸುತಿದ್ದಾರೆ. ಮನೆಯ ಮುಂದೆ ಇರುವ ಕಟ್ಟೆ ಮೇಲೆ ಕುಳಿತರು ಮಾಸ್ಕ್ ಧರಿಸಿ ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹೊಲಗಳಿಗೆ ಹೋಗುವಾಗ ರೈತರು ಸಹ ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಈ ಮುಂಚೆ ಗ್ರಾಮದಲ್ಲಿ ಏಳು ಜನರಿಗೆ ಸೋಂಕು ತಗುಲಿತ್ತು. ಗ್ರಾಮ ಪಂಚಾಯಿತಿಯ ಶ್ರಮದಿಂದ ಸೋಂಕು ಮುಂದೆ ಹರಡದಂತೆ ನೋಡಿಕೊಳ್ಳಲಾಗಿದೆ. ಇದೀಗ ಏಳು ಜನರು ಗುಣಮುಖರಾಗಿದ್ದು, ನಂತರದಲ್ಲಿ ಇಲ್ಲಿವರೆಗೆ ಯಾರಿಗೂ ಸೋಂಕು ತಗುಲಿಲ್ಲ ಅನ್ನೋದು ಗಮನಾರ್ಹ ವಿಷಯವಾಗಿದೆ.
ಕಂದಗೂಳ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚು ತಪ್ಪದೆ ಜನ ಪಾಲಿಸುತ್ತಿದ್ದಾರೆ. ಜನ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವದಿಲ್ಲ. ಹೋಟೆಲ್ ಸೇರಿ ಪ್ರತಿಯೊಂದು ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ದಿನಸಿ ಅಂಗಡಿಯವರು ತಿಂಗಳಿಗೊಮ್ಮೆ ಮಾತ್ರ ಜಿಲ್ಲಾ ಕೇಂದ್ರಕ್ಕೆ ತೆರಳಿ ತಿಂಗಳಿಗೆ ಬೇಕಾಗುವ ಕಿರಾಣಿ ದಿನಸಿಯನ್ನು ಹೋಲ್ ಸೇಲ್ ಖರೀದಿಸಿ ತಂದಿಟ್ಟಿದ್ದು, ಪದೇ ಪದೆ ಸಿಟಿಗೆ ಹೋಗುವುದನ್ನು ತಪ್ಪಿಸಿದ್ದಾರೆ. ಇದರಿಂದ ಸೋಂಕು ಗ್ರಾಮಕ್ಕೆ ಎಂಟ್ರಿ ಆಗುವದು ತಪ್ಪಿದಂತಾಗಿದೆ.