ಸೇಡಂ (ಕಲಬುರಗಿ): ಕೊರೊನಾ ಹಾವಳಿಯ ಸಮಯದಲ್ಲಿ ರಾಜಕೀಯ ಸಭೆ ನಡೆಸಿದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯ ಯಾವ ದೇಶದ್ರೋಹಕ್ಕೂ ಕಡಿಮೆಯಿಲ್ಲ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆಪಾದಿಸಿದರು.
ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಕಲ್ಯಾಣ ಮಂಟಪದಲ್ಲಿ ಅನುಮತಿ ಇಲ್ಲದೆ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಕಾನೂನು ಉಲ್ಲಂಘನೆ ಆರೋಪದಡಿ ಅಧಿಕಾರಿಗಳು 23 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ವಿಷಯದಲ್ಲಿ ತಾವು ಎಸಗಿದ ತಪ್ಪು ಮರೆಮಾಚಲು ಘಟನೆಗೆ ನಾನು ಕುಮ್ಕಕ್ಕು ನೀಡಿದ್ದೇನೆ ಎಂದು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದರು.
ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮೊದಲು ತಾವೊಬ್ಬ ಮಾಜಿ ಶಾಸಕರು ಎಂಬುದನ್ನು ಅರಿಯಬೇಕು. ಕಾನೂನು ತಿಳಿಯದಿದ್ದರೆ ವಕೀಲರ ಬಳಿ ಟೂಷನ್ಗೆ ಹೋಗಲಿ ಎಂದು ವ್ಯಂಗ್ಯವಾಡಿದರು. ಕಾನೂನಿನಡಿ ಶಾಸಕರು ಜನರ ಸಮಸ್ಯೆಗಳನ್ನು ಪರಿಹರಿಸುವ ಅವಕಾಶವಿದೆ. ಸೋತಿರುವ ದುಃಖದಲ್ಲಿ ಕಾನೂನಿನ ತಿಳುವಳಿಕೆ ಪಡೆಯುವ ಅವಶ್ಯಕತೆ ಇದೆ ಎಂದು ಕಿಡಿಕಾರಿದರು.
ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಜನರಿಗೆ ಕೂಲಿ ಕೊಡಿಸಲಿಲ್ಲ. ಕೊರೊನಾದ ವಿರುದ್ಧ ಹೋರಾಡುವ ಜವಾಬ್ದಾರಿ ನನ್ನ ಮೇಲಿದೆ. ಮಾಜಿಗಳ ಮೇಲಲ್ಲ. ಮೊದಲು ನಮ್ಮ ಕಡೆ ಬೆರಳು ಮಾಡುವುದನ್ನು ನಿಲ್ಲಿಸಬೇಕು ಎಂದು ಗುಡುಗಿದರು.
ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿಯದ್ದಾಗಲಿ, ನನ್ನದಾಗಲಿ ಯಾವುದೇ ರಾಜಕೀಯ ಹಗೆತನವಾಗಲಿ, ಕೈವಾಡವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಶರಣಪ್ರಕಾಶ ಪಾಟೀಲ ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.