ಕಲಬುರಗಿ: ಪ್ರಧಾನಿ ಮೋದಿ ಭಾಷಣದ ನಂತರ ದೇಶದೆಲ್ಲೆಡೆ ಲಾಕ್ಡೌನ್ ವಿಸ್ತರಿಸಲಾಗಿದೆ. ಮನೆಗಳಿದ್ದವರೇನೋ ಮನೆಗಳಲ್ಲೇ ಇರುತ್ತಾರೆ. ಆದರೆ ಬೀದಿಯಲ್ಲಿ ಭಿಕ್ಷೆ ಬೇಡುವವರ ಮತ್ತು ನಿರ್ಗತಿಕರ ಪರಿಸ್ಥಿತಿ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನಿನ್ನೆಯಷ್ಟೆ ಈಟಿವಿ ಭಾರತ ಲಾಕ್ಡೌನ್ಗೆ ನಲುಗಿದ ಭಿಕ್ಷುಕರು, ನಿರ್ಗತಿಕರು ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಗಮನಿಸಿದ ವಾಡಿ ಪುರಸಭೆ, ಭಿಕ್ಷುಕರು ಮತ್ತು ನಿರ್ಗತಿಕರಿಗೆ ನೆರವಿನ ಹಸ್ತ ಚಾಚಿದೆ.
ವಾಡಿ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಬಳಿ ಊಟಕ್ಕಾಗಿ ಪರದಾಡುತ್ತಿದ್ದ ಭಿಕ್ಷುಕರು ಮತ್ತು ನಿರ್ಗತಿಕರಿಗೆ ಪುರಸಭೆ ಸಿಬ್ಬಂದಿ ಊಟದ ಪ್ಯಾಕೆಟ್ ಹಾಗೂ ಮಾಸ್ಕ್ ವಿತರಿಸಿದ್ದಾರೆ. ಭಿಕ್ಷುಕರು ಮತ್ತು ನಿರ್ಗತಿಕರ ಕಷ್ಟ ಅರಿವಾದ ಕೂಡಲೇ ಪುರಸಭೆಯ ಕೆಲ ಸದಸ್ಯರು ಹಾಗೂ ಅಧಿಕಾರಿಗಳು ನೆರವಾಗಲು ಮುಂದಾಗಿದ್ದಾರೆ.
ಇನ್ನು ಲಾಕ್ಡೌನ್ ಆದೇಶ ಮುಗಿಯುವವರೆಗೂ ಭಿಕ್ಷುಕರು ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸೋದಾಗಿ ಪುರಸಭೆ ಅಧಿಕಾರಿ ಕಾಶಿನಾಥ್ ತಿಳಿಸಿದ್ದಾರೆ.