ಕಲಬುರಗಿ : ಸ್ವಾಮೀಜಿಯೋರ್ವರಿದ್ದ ಕಾರು ರಸ್ತೆ ದಾಟುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಸರಡಗಿ ಗ್ರಾಮದ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ. ಶಿವಶರಣಪ್ಪ(55) ಹಾಗೂ ಆತನ ಪತ್ನಿ ಗುಂಡಮ್ಮ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಮೃತ ದಂಪತಿ ಜೇವರ್ಗಿ ತಾಲೂಕಿನ ಕೋನಹಿಪ್ಪರಗಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕಲಬುರಗಿ ನಗರಕ್ಕೆ ಆಗಮಿಸಿದ್ದ ಅವರು ತಮ್ಮ ಕೆಲಸ ಮುಗಿಸಿಕೊಂಡು ತಮ್ಮೂರಿಗೆ ಬಸ್‌ನಲ್ಲಿ ಸರಡಗಿ ಕ್ರಾಸ್‌ವರೆಗೂ ಹೋಗಿದ್ದಾರೆ.
ಸರಡಗಿ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಲಬುರಗಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ದಂಪತಿಯ ಸಾವಿಗೆ ಕಾರಣವಾದ ಕಾರಿನಲ್ಲಿ ಯಡ್ರಾಮಿ ತಾಲೂಕಿನ ಯಲಗೋಡದ ಪರಮಾನಂದ ಮಠದ ಶ್ರೀ ಗುರುಲಿಂಗ ಸ್ವಾಮಿ ಸೇರಿ ನಾಲ್ವರು ಇದ್ದರು. ಸರಡಗಿ ಕ್ರಾಸ್ ಹತ್ತಿರ ತಿರುವು ಇದ್ದರೂ ಕೂಡ ಚಾಲಕ ವೇಗವಾಗಿ ಕಾರು ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಆದರೆ, ಕಾರಿನಲ್ಲಿದ್ದ ಸ್ವಾಮೀಜಿ ಹಾಗೂ ಕಾರು ಚಾಲಕ ಸೇರಿ ಯಾರಿಗೂ ಗಾಯಗಳಾಗಿಲ್ಲ. ಎಲ್ಲರೂ ಸೇಫ್ ಆಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಟ್ರಾಫಿಕ್ ಸಿಪಿಐ ಶಾಂತಿನಾಥ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.