ಕಲಬುರಗಿ: ದೇಶದ ಯಾವುದೇ ಮೂಲೆಗೆ ಹೋದರೂ ಚಮ್ಮಾರರು ಸಿಗುತ್ತಾರೆ. ಬಿಸಿಲಿರಲಿ, ಮಳೆ ಬರಲಿ ರಸ್ತೆ ಪಕ್ಕದಲ್ಲಿ ಕುಳಿತು ತಮ್ಮ ಕಾಯಕ ನೆರವೇರಿಸೋ ಕಾಯಕ ಜೀವಿಗಳು ಚಮ್ಮಾರರು. ಆದರೆ ಲಾಕ್ಡೌನ್ನಿಂದಾಗಿ ಚಮ್ಮಾರರ ಬದುಕು ಸಂಕಷ್ಟಕ್ಕೀಡಾಗಿದೆ. ಚಮ್ಮಾರರು ರಸ್ತೆ ಬದಿ ಬಂದು ಕುಳಿತರೂ ಅವರ ಬಳಿ ಜನ ಬಂದು ಚಪ್ಪಲಿ ರಿಪೇರಿ, ಬೂಟ್ ಪಾಲಿಶ್ ಮಾಡಿಸಿಕೊಳ್ಳಲು ಹೆದರುತ್ತಿದ್ದಾರೆ. ನಿತ್ಯ 300ರಿಂದ 400 ರೂ. ದುಡಿಯುತ್ತಿದ್ದ ಚಮ್ಮಾರನ ಕೈಗೆ ಈಗ 30ರಿಂದ 40 ರೂಪಾಯಿ ಆದಾಯ ಸಿಗೋದು ಡೌಟ್ ಎನ್ನುವಂತಾಗಿದೆ.
ನಿತ್ಯ ದುಡಿದರೆ ಮಾತ್ರ ತುತ್ತು ಅನ್ನ ಎನ್ನುವ ಸ್ಥಿತಿ ಚಮ್ಮಾರನದ್ದು. ಆತನ ದುಡಿಮೆಯ ಮೇಲೆಯೇ ಅವರ ಕುಟುಂಬವೂ ಅವಲಂಬಿಸಿದೆ. ಇವರಿಗೆ ಆದಾಯವಿಲ್ಲದಿರುವಾಗ ಕುಟುಂಬದ ಪೋಷಣೆ ಹೇಗೆ ಎನ್ನೋ ಪ್ರಶ್ನೆ ಎದುರಾಗಿದೆ. ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಹಾರ್ಟ್ ತೊಂದರಿಗೆ ತುತ್ತಾದ ತಾಯಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಔಷಧಕ್ಕೆ ಬೇಕು. ಆದರೆ ಬರೋ ಆದಾಯ ಒಂದು ಹೊತ್ತಿನ ಊಟಕ್ಕೂ ಸಾಲದಂತಾಗಿದೆ. ಹೀಗಿರಬೇಕಾದರೆ ತಾಯಿಗೆ ಔಷಧ ತಂದು ಕೊಡೋದಾದ್ರೂ ಹೇಗೆ ಎಂದು ಚಮ್ಮಾರ ಆನಂದರಾಯ ಎಂಬುವರು ಅಳಲು ತೋಡಿಕೊಂಡಿದ್ದಾರೆ.
![ಲಾಕ್ಡೌನ್ನಿಂದ ಸಂಕಷ್ಟದಲ್ಲಿ ಚಮ್ಮಾರರ ಬದುಕು](https://etvbharatimages.akamaized.net/etvbharat/prod-images/20200510-114922jpg_11052020153142_1105f_01634_508.jpg)
ಒಟ್ಟಾರೆ ಕೊರೊನಾ ಲಾಕ್ಡೌನ್ ಬಡವರಿಗೆ, ದುಡಿಯುವ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಿದೆ. ಚಮ್ಮಾರರ ಬದುಕಿಗೆ ಅಡಚಣೆಯುಂಟು ಮಾಡಿದೆ. ಏನಾದರೂ ಸಹಾಯ ಮಾಡಿ, ನೆರವಾಗಬೇಕೆಂದು ಚಮ್ಮಾರರು ಸರ್ಕಾರವನ್ನು ಅಂಗಲಾಚುತ್ತಿದ್ದಾರೆ.