ಕಲಬುರಗಿ: ಮರಾಠ ಅಭಿವೃದ್ಧಿ ನಿಗಮ ರದ್ದು ಮಾಡುವಂತೆ ಆಗ್ರಹಿಸಿ ಕರೆ ನೀಡಲಾದ ಕರ್ನಾಟಕ ಬಂದ್ಗೆ ಬಿಸಿಲನಾಡು ಕಲಬುರಗಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದ್ದರೂ ಪ್ರತಿಭಟನೆ ಬಿಸಿ ಜೋರಾಗಿತ್ತು.
ಕಲಬುರಗಿ ಜಿಲ್ಲೆಯಲ್ಲಿ ಬಂದ್ ವಾತಾವರಣ ಅಷ್ಟಾಗಿ ಕಂಡು ಬರಲಿಲ್ಲ. ಬೆಳಿಗ್ಗೆಯಿಂದಲೇ ಸಾರಿಗೆ ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಸಹಜವಾಗಿತ್ತು. ಸೂಪರ್ ಮಾರ್ಕೆಟ್, ಕಿರಾಣಾ ಬಜಾರ್, ಸರಾಫ್ ಬಜಾರ್ನ ವರ್ತಕರು ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ಹಾಗೂ ಹೋಟೆಲ್ಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು.
ಕನ್ನಡಪರ ಸಂಘಟನೆ ಕಾರ್ಯಕರ್ತರ ಬಂಧನ
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಕಲಬುರಗಿಯಲ್ಲಿ ಪೊಲೀಸರು ಬಂಧಿಸಿದರು.
ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಪ್ರತಿಭಟನಾಕಾರರು ಉರುಳು ಸೇವೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಇಪ್ಪತ್ತಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿದರು.
ಇದನ್ನೂ ಓದಿ..ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಇಂದು ಬಂದ್ಗೆ ಕರೆ: ಎಲ್ಲೆಲ್ಲಿ ಪ್ರತಿಭಟನೆ? ಎನಿರುತ್ತೆ, ಏನಿರಲ್ಲ?
ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಮರಾಠ ಅಬಿವೃದ್ಧಿ ನಿಗಮ ರದ್ದುಗೊಳಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮುಖ್ಯಮಂತ್ರಿಗಳ ಅಣಕು ಶವಯಾತ್ರೆಗೆ ಯತ್ನಿಸಿದರು. ಸಿಎಂ ಪ್ರತಿಕೃತಿ ವಶಪಡಿಸಿಕೊಂಡ ಪೊಲೀಸರು, 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರ, ಸಿಎಂ ಹಾಗೂ ಶಾಸಕ ಯತ್ನಾಳ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಭಿನ್ನ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಸೈನ್ಯ ಕಾರ್ಯಕರ್ತರು ಶ್ವಾನಗಳ ಕೊರಳಿಗೆ ಸಿಎಂ ಯಡಿಯೂರಪ್ಪ ಮತ್ತು ಶಾಸಕ ಯತ್ನಾಳ್ ಫೋಟೋ ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ಬಂಧಿಸಿದರು.