ಸೇಡಂ : ಗ್ರಾಮೀಣ ಭಾಗಗಳು ಗಟ್ಟಿಯಾದರೆ, ದೇಶ ಸದೃಢವಾಗುತ್ತದೆ ಎಂಬ ಮಾತಿದೆ. ಅದರಂತೆ ಸೇಡಂ ತಾಲೂಕಿನ ತೇಲ್ಕೂರ ಗ್ರಾಮ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಮಾದರಿ ಗ್ರಾಮವಾಗುವತ್ತ ಸಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಸುವರ್ಣ ಶಿವರಾಯ ತೇಲ್ಕುರ ಅವರ ಜನಪರ ಕಾಳಜಿಯಿಂದ ಇಡೀ ಗ್ರಾಮವೇ ಈಗ ಬಹುತೇಕ ಮೂಲ ಸೌಲಭ್ಯಗಳನ್ನು ಪಡೆದುಕೊಂಡಿದೆ. ಅಲ್ಲದೇ ಉದ್ಯೋಗ ಖಾತರಿ ಯೋಜನೆಯಡಿ ಅತೀ ಹೆಚ್ಚಿನ ಉದ್ಯೋಗ ಪಡೆದು ಸಾಧನೆ ಮಾಡಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳು, ಶುದ್ಧ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಮುದಾಯ ಭವನ, ಶಾಲಾ ಕೊಠಡಿ ವ್ಯವಸ್ಥೆ ಇದೆ. ಇನ್ನು ಸರ್ಕಾರದ ಬಹುತೇಕ ಯೋಜನೆಗಳನ್ನು ಇಲ್ಲಿ ಜಾರಿಗೆ ತರಲಾಗಿದೆ.
ಸರ್ಕಾರದ ಅನುದಾನವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇಲ್ಲಿಯವರೆಗೂ 3 ಕೋಟಿ ರೂ. ಗಳನ್ನು ಈ ಗ್ರಾಮದ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ. ಪ್ರತಿ ಪಂಚಾಯತ್ನಲ್ಲಿ ಸಾವಿರ ಜನರಿಗೆ ಉದ್ಯೋಗ ಖಾತ್ರಿಯಡಿ ಕೂಲಿ ಕೆಲಸ ದೊರೆಯಬೇಕು ಎಂಬ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರ ಕರೆಯಂತೆ, ಈಗಾಗಲೇ ತೇಲ್ಕೂರ ಪಂಚಾಯಿತಿಯಲ್ಲಿ 500 ಕ್ಕೂ ಅಧಿಕ ಜನರಿಗೆ ಜಾಬ್ ಕಾರ್ಡ್ ನೀಡಲಾಗಿದೆ.