ಅಫಜಲಪುರ: ಸಾಮಾನ್ಯವಾಗಿ ಮಠಾಧೀಶರು ಮಠ-ಮಂದಿರಗಳ ಅಭಿವೃದ್ಧಿಗಾಗಿ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಮಠದ ಕೆಲಸಗಳನ್ನು ಬದಿಗಿಟ್ಟು ಗ್ರಾಮದ ಶಾಲಾ ಕಟ್ಟಡದ ನಿವೇಶನಕ್ಕಾಗಿ ಅಕ್ಷರ ಜೋಳಿಗೆ ಹೆಸರಿನ ಮೇಲೆ ದೇಣಿಗೆ ಸಂಗ್ರಹಿಸಿ ನಿವೇಶನ ಖರೀದಿಸಲು ಮುಂದಾಗಿದ್ದಾರೆ.
ರಾಜ್ಯದ ಹೆಸರಾಂತ ಧಾರ್ಮಿಕ ಸ್ಥಳ ಭಾಗ್ಯವಂತಿ ದೇವಿ ನೆಲೆಸಿರುವ ಭೀಮಾ ನದಿ ದಂಡೆಯಲ್ಲಿರುವ ಘತ್ತರಗಾ ಗ್ರಾಮದ ಪ್ರೌಢಶಾಲೆ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಕುಸಿದು ಬೀಳುವ ಸ್ಥಿತಿ ತಲುಪಿದೆ. ಸರ್ಕಾರ ಹಲವು ಬಾರಿ ಹೊಸದಾಗಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದರೂ ಸಹ ಹಳೆಯ ಕಟ್ಟಡ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಹೊಸದಾಗಿ ಯಾವುದೇ ಕಟ್ಟಡ ನಿರ್ಮಾಣ ಮಾಡಲು ಅವಕಾಶ ನೀಡುತ್ತಿಲ್ಲ.
ಸರ್ಕಾರದಿಂದ ಅನುದಾನ ಬಂದರೂ ಸಹ ಸದ್ಬಳಕೆ ಮಾಡಿಕೊಳ್ಳಲಾರದಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ರೋಸಿ ಹೋದ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡು ಕಳೆದ ಸೆಪ್ಟೆಂಬರ್ 17ರಂದು ಕಲಬುರಗಿ ನಗರದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ ಸಂಗತಿ ತಿಳಿದುಕೊಂಡು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕೂಡಿ ಶಾಲೆಯಿಂದ ಪಾದಯಾತ್ರೆ ಮೂಲಕ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇದನ್ನರಿತ ಜಿಲ್ಲಾಡಳಿತ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿತ್ತು.
ಹೀಗಾಗಿ ಪಾದಯಾತ್ರೆಯನ್ನು ಕೈಬಿಡಿ ಎಂದು ಸಹಾಯಕ ಆಯುಕ್ತೆ ಮೋನಾ ರೋತ್ ಅವರ ಮೂಲಕ ಗ್ರಾಮಸ್ಥರ ಮನವೊಲಿಸಿ ವಿದ್ಯಾರ್ಥಿಗಳ ಪರವಾಗಿ ಮುಖ್ಯಮಂತ್ರಿಗಳಿಗೆ ಕೆಲವು ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಆಕ್ರೋಶಗೊಂಡು ಗ್ರಾಮಸ್ಥರು ಎಲ್ಲರೂ ಸೇರಿಕೊಂಡು ಡಾ.ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಗ್ರಾಮದಲ್ಲಿ ಸರ್ವಧರ್ಮಗಳ ಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ಜನರು ತಮ್ಮ ಮನೆಗೆ ಬಂದ ಶ್ರೀಗಳಿಗೆ ಪಾದಪೂಜೆ ಮಾಡಿ ಕೈಲಾದಷ್ಟು ದೇಣಿಗೆಯನ್ನು ಅಕ್ಷರ ಜೋಳಿಗೆಯಲ್ಲಿ ಹಾಕುತ್ತಿದ್ದಾರೆ. ಒಟ್ಟು 5 ಎಕರೆ ಜಮೀನು ಖರೀದಿಸಿ ಅದರಲ್ಲಿ 3 ಎಕರೆ ಶಾಲೆ ಕಟ್ಟಡಕ್ಕಾಗಿಯೂ ಇನ್ನುಳಿದ 2 ಎಕರೆ ಜಮೀನು ವಿವಿಧ ಇಲಾಖೆಯ ಕಚೇರಿಗಳ ಕಟ್ಟಡಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ದಿನದಲ್ಲೇ ಒಟ್ಟು 25 ಲಕ್ಷ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. ಇನ್ನೆರಡು ದಿನ ಹಣ ಸಂಗ್ರಹ ಮಾಡಲಾಗುವುದು. ಸುಮಾರು 60 ಲಕ್ಷಕ್ಕೂ ಅಧಿಕ ದೇಣಿಗೆ ಹಣ ಸಂಗ್ರಹಿಸಲು ನಿರ್ಧರಿಸಿದ್ದಾರೆ.
ಸ್ಥಳೀಯ ಶಾಸಕ ಎಂ.ವೈ.ಪಾಟೀಲ್ ಒಂದು ಎಕರೆ ಜಮೀನು ಖರೀದಿಸಿ ಕೊಡಲು ಒಪ್ಪಿದ್ದಾರೆ. ಅದೇ ರೀತಿ ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಜಮೀನು ಖರೀದಿಗೆ ಸಹಾಯ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಭೂಮಿ ಖರೀದಿಸಲು ಪುರಾಣ ಕಾರ್ಯಕ್ರಮ: ಘತ್ತರಗಾ ಗ್ರಾಮದಲ್ಲಿ ಯಾವುದೇ ರೀತಿಯ ಸರ್ಕಾರಿ ನಿವೇಶನವಿಲ್ಲ. ಹೀಗಾಗಿ ಖಾಸಗಿ ಭೂಮಿ ಖರೀದಿಸಬೇಕು. ಭೂಮಿ ಖರೀದಿಗೆ ಗ್ರಾಮದಲ್ಲಿ ಕಡಕೋಳ ಮಡಿವಾಳಪ್ಪನವರ ಪುರಾಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪುರಾಣದಿಂದ ಬರುವ ದೇಣಿಗೆ ಹಣದಲ್ಲಿ ಭೂಮಿ ಖರೀದಿಸಿ ಸರ್ಕಾರಕ್ಕೆ ದಾನವಾಗಿ ನೀಡುವ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಶ್ರೀ ಮಳೇಂದ್ರ ಸಂಸ್ಥಾನ ಮಠದ ವಿಶ್ವಾರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 20ರವರೆಗೆ ಪುರಾಣ ಕಾರ್ಯಕ್ರಮ ಜರುಗಲಿದೆ.
ಡಾ.ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, 'ಘತ್ತರಗಾದಲ್ಲಿ ಈಗಿರುವ ಶಾಲೆಯ ನಿವೇಶನ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇರುವುದರಿಂದ ಅವರು ಹೊಸದಾಗಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ. ಇದರಿಂದಾಗಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಮಸ್ಯೆ ಆಗುತ್ತಿದೆ. ಭಕ್ತರ ಸಹಕಾರದೊಂದಿಗೆ ದೇಣಿಗೆ ಸಂಗ್ರಹಿಸಿ 5 ಎಕರೆ ಜಮೀನು ಖರೀದಿಸಿ ಶಾಲೆ ಹಾಗೂ ವಿವಿಧ ಇಲಾಖೆಯ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಹಸ್ತಾಂತರಿಸುತ್ತೇವೆ' ಎಂದು ಹೇಳಿದರು.
'ಶಾಲಾ ಕಟ್ಟಡಕ್ಕಾಗಿ ನಿವೇಶನ ಖರೀದಿಸಲು ಸರ್ಕಾರದ ಹಂತದಲ್ಲಿ ಅವಕಾಶವಿಲ್ಲ. ಹೀಗಾಗಿ ಸ್ಥಳೀಯರು ಯಾರಾದರೂ ದಾನ ನೀಡಿದರೆ ಆ ಶಾಲೆಗೆ ಅವರ ಹೆಸರಿಡಲಾಗುವುದು' ಎಂದು ಕಲಬುರಗಿ ಡಿಡಿಪಿಐ ಸಕ್ರೇಪ್ಪಗೌಡ ಬಿರಾದಾರ ತಿಳಿಸಿದರು.
ಇದನ್ನೂ ಓದಿ: ಡಿ.19ರಿಂದ ಬೆಳಗಾವಿಯಲ್ಲಿ ಅಧಿವೇಶನ.. ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ