ಕಲಬುರಗಿ: ಪ್ರತಿ ಟನ್ ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ಬೆಲೆ (ಎಫ್‌ಆರ್‌ಪಿ) ಹೆಚ್ಚಿಸುವಂತೆ ಆಗ್ರಹಿಸಿ ಇಂದು ರೈತರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಬ್ಬಿನ ಜೊತೆ ಸಾಗಿ ಬಂದು ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ: ಈ ಸಂದರ್ಭದಲ್ಲಿ ಬೆಳೆಗಾರರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಮಧ್ಯ ಪ್ರವೇಶಿಸಿದ ಪೊಲೀಸರು ಮತ್ತು ರೈತರ ನಡುವೆ ಕೆಲಕಾಲ ವಾಗ್ವಾದ ಕೂಡಾ ನಡೆಯಿತು. ಕೆಲಕಾಲ ತಳ್ಳಾಟ, ನೂಕಾಟವೂ ನಡೆಯಿತು. ರೈತರು ಡಿಸಿ ಕಚೇರಿ ಎದುರು ಸುಮಾರು 3 ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಸರ್ಕಾರ ಮತ್ತು ಪೊಲೀಸರ ವಿರುದ್ದ ಕಿಡಿಕಾರಿದರು. ಇದರಿಂದಾಗಿ ಪ್ರಯಾಣಿಕರು ಪರದಾಟ ನಡೆಸುವಂತಾಯ್ತು.
ಪ್ರತಿಭಟನಾನಿರತ ರೈತರೊಬ್ಬರು ಮಾತನಾಡಿ, ಪ್ರತಿ ಟನ್ ಕಬ್ಬಿಗೆ ಸರ್ಕಾರ ಎಫ್‌ಆರ್‌ಪಿಯಾಗಿ 3,150 ರೂ. ನಿಗದಿಪಡಿಸಿದೆ. ಈ ದರವನ್ನು 5,500ಕ್ಕೆ ಹೆಚ್ಚಿಸಬೇಕು. ಕಬ್ಬು ಕಟಾವು ವೇಳೆ ಮಧ್ಯವರ್ತಿಗಳು ರೈತರ ಸುಲಿಗೆ ಮಾಡುವುದನ್ನು ತಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಸಿ: ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರು ರೈತರ ಮನವಿ ಸ್ವೀಕರಿಸಿದರು. ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ ತಿಳಿಸಿದರು. ಅಲ್ಲದೇ, ಕಬ್ಬು ಬೆಳೆಗಾರರು ಮತ್ತು ರೈತರ ಮಧ್ಯೆ ದ್ವಿಪಕ್ಷೀಯ ಒಪ್ಪಂದ ಮಾಡಲಾಗುತ್ತಿದೆ. ರೈತರು ಈ ಒಪ್ಪಂದಕ್ಕೆ ಸಹಿ ಹಾಕುವಂತೆಯೂ ಅವರು ಮನವಿ ಮಾಡಿದರು.
ಇದರಿಂದಾಗಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಸಾಧ್ಯವಿದೆ. ಕಬ್ಬು ಕಟಾವು ನಡೆಯುವಾಗ ಮಧ್ಯವರ್ತಿಗಳಿಂದ ಸುಲಿಗೆಗೆ ಸಂಬಂಧಪಟ್ಟಂತೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಡಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆದರೆ, ಮನವಿ ಸಲ್ಲಿಸಿದ ಬಳಿಕವೂ ರಸ್ತೆ ತಡೆ ಮುಂದುವರೆಸಿದರು.
ಇದನ್ನೂ ಓದಿ; ಹೈಟೆನ್ಷನ್ ವೈರ್ ಬಿದ್ದು ನಾಲ್ವರು ಕೃಷಿ ಕಾರ್ಮಿಕರ ದುರ್ಮರಣ