ಕಲಬುರಗಿ: ಶಾಲಾ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಬೆಳಕೋಟಾ ಕೆರೆಯಲ್ಲಿ ನಡೆದಿದೆ.
ಮೃತರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶ್ರೀ ಸತ್ಯ ಸಾಯಿ ಪ್ರೇಮ ನಿಕೇತನ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. 8ನೇ ತರಗತಿ ವಿದ್ಯಾರ್ಥಿ ಲಕ್ಷ್ಮಣ ಡೊಣ್ಣೂರು, 9ನೇ ತರಗತಿಯ ಶುಭಂ ಸೋಸೂರ ಮತ್ತು ಮಂಜುನಾಥ ಯಾದವಾಡ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಶಾಲಾ ಪ್ರವಾಸಕ್ಕೆಂದು ಒಟ್ಟು 96 ವಿದ್ಯಾರ್ಥಿಗಳು ಕಮಲಾಪುರದ ಸತ್ಯಸಾಯಿ ಶಾಲೆಗೆ ಬಂದಿದ್ದರು. ಶಾಲಾ ಪ್ರವಾಸ ಮುಗಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಹಾಗೂ ನಾಲ್ವರು ಗುರುಗಳು ಬೆಳಕೋಟಾ ಗಂಡೋರಿ ನಾಲಾಗೆ ತೆರಳಿದಾಗ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.