ಕಲಬುರಗಿ: ಲಾಕ್‌ಡೌನ್ ಸಮಯದಲ್ಲಿ ಟೈಮ್ಪಾಸ್ಗೋಸ್ಕರ ಬರೆಯುವುದನ್ನು ರೂಢಿಸಿಕೊಂಡ ವಿದ್ಯಾರ್ಥಿನಿ ಕೇವಲ ಹತ್ತು ತಿಂಗಳಲ್ಲಿ ತನ್ನ ವಿಭಿನ್ನ ಶೈಲಿಯ ಬರಹದ ಮೂಲಕ ಅಂತಾರಾಷ್ಟ್ರಿಯ ಮಟ್ಟದ ಬರಹಗಾರ್ತಿಯ ಪಟ್ಟಿಯಲ್ಲಿ ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ.
ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಿಡಿದು ನಿಂತಿರುವ ಇವರ ಹೆಸರು ಮನಸ್ವಿ ಪಾಟೀಲ್. ಕಲಬುರಗಿಯ ಪ್ರತಿಷ್ಠಿತ ಶರಣಬಸವೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿನಿ. ಲಾಕ್‌ಡೌನ್ ಸಂದರ್ಭದಲ್ಲಿ ಟೈಮ್ ಪಾಸ್‌ಗೆ ಅಂತ ಇಂಗ್ಲೀಷ್ನಲ್ಲಿ ಕವನಗಳನ್ನು ಬರೆದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನ್ನು ವೇದಿಕೆಯನ್ನಾಗಿ ಮಾಡಿಕೊಂಡು ಅಕ್ಷರ ಪ್ರಿಯರನ್ನು ಸೆಳೆಯುವ ಮೂಲಕ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಬರಹಗಾರ್ತಿಯರ ಪಟ್ಟಿಗೆ ಸೇರಿದ್ದಾರೆ.
ಇವರ ವಿಭಿನ್ನ ಶೈಲಿಯ ಬರಹಗಳು ಅಕ್ಷರ ಪ್ರಿಯರಿಗೆ ರಸದೌತಣ ನೀಡುತ್ತಿವೆ. ಇನ್ಸ್ಟಾಗ್ರಾಂನಲ್ಲಿ ಇವರ ಬರಹಗಳನ್ನು ಮೆಚ್ಚಿದ ದೆಹಲಿ ಮೂಲದ ಪ್ರತಿಷ್ಠಿತ ಇಂಕ್ ಫೆದರ್ ಪಬ್ಲಿಷಿಂಗ್ನವರು ಮನಸ್ವಿಯನ್ನು ಸಂಪರ್ಕಿಸಿ "ಜೀವನದ ನೆನಪುಗಳು - ಮೊಬೈಲ್ ಮೆಮೋರಿಕಾರ್ಡ್" ಎರಡನ್ನು ಹೋಲಿಕೆ ಮಾಡಿ ಕವನ ಬರೆಸಿದ್ದಾರೆ. ಅಚ್ಚುಕಟ್ಟಾಗಿ ಬರೆದ ಇವರ ಕವನವನ್ನು ಬುಕ್ನಲ್ಲಿ ಮುದ್ರಿಸಿ ಪ್ರಕಟಿಸಿದ್ದಾರೆ. ಇಲ್ಲಿವರೆಗೆ 52 ಕವನಗಳನ್ನು ಬರೆದಿದ್ದು ಈಗಾಗಲೇ ದಿವ್ಯಂ, ಮಿಡ್ ನೈಟ್ ರೈಟರ್ಸ್, ಇನ್ ಎರಾ, ಸೇರಿದಂತೆ 25 ರಾಷ್ಟ್ರ ಅಂತಾರಾಷ್ಟ್ರಿಯ ಮಟ್ಟದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಕವನಗಳನ್ನು ಪ್ರಕಟಿಸಿವೆ.
ಇದನ್ನು ಓದಿ: ಪ್ರೇಮಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಫೋನ್ ಕಾಲ್: ತಾಜ್ಮಹಲ್ ಬಂದ್
"ದಿವ್ಯಾಂ- ಲೈಫ್ ಆ್ಯಂಡ್ ರಿಯಾಲಿಟಿ ವಿಥಿನ್" ಎಂಬ ಪುಸ್ತಕದಲ್ಲಿ ಪ್ರಕಟಗೊಂಡ 'ಸೈನ್ಸ್ ನೀಡ್ಸ್ ಮೈಥ್ಸ್ ಟೂ ಥ್ರೀವ್' ಎಂಬ ಕವನಕ್ಕೆ ಕಲಾಂ ಗೋಲ್ಡನ್ ಅವಾರ್ಡ್ ನೀಡಲಾಗಿದೆ. ಮಾತ್ರವಲ್ಲ ಏಶಿಯನ್ ರೆಕಾರ್ಡ್ ಆಫ್ ಇನ್ ದ ಎರಾ ಒಳಗೊಂಡಂತೆ ಹತ್ತು ಹಲವು ಅವಾರ್ಡ್‌ಗಳನ್ನು ಪಡೆದಿದ್ದಾಳೆ.
ಮನಸ್ವಿ ಪಾಟೀಲ್ ಚಿಕ್ಕಂದಿನಿಂದಲೂ ಓದಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ. 10ನೇ ತರಗತಿಯಲ್ಲಿ ಶೇ 96 ರಷ್ಟು ಅಂಕಗಳನ್ನು ಗಳಿಸಿದ್ದಾಳೆ. ಸದ್ಯ ಕಲಬುರಗಿಯ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಮನಸ್ವಿ ವೈದ್ಯಳಾಗುವ ಕನಸ್ಸು ಹೊತ್ತು ಪರಿಶ್ರಮದಿಂದ ಓದಿನಲ್ಲಿ ತೊಡಗಿದ್ದಾಳೆ. ಲಾಕ್‌ಡೌನ್ ಸಂದರ್ಭದಲ್ಲಿ ಸಮಯವನ್ನು ಹಾಳು ಮಾಡುವ ಬದಲು ಓದಿನೊಂದಿಗೆ ಕವನಗಳನ್ನು ಬರೆದು ಸಾಧನೆ ಮಾಡಿದ್ದಾಳೆ. ದ್ವಿತೀಯ ಪಿಯು ಪರೀಕ್ಷೆ ಹಾಗೂ ನೀಟ್ ಪರೀಕ್ಷೆಗೆ ತಯಾರಿ ನಡೆಸಿರುವ ಮನಸ್ವಿ ಪರೀಕ್ಷೆ ನಂತರ ಮತ್ತಷ್ಟು ಕವನಗಳನ್ನು ಬರೆದು ತಾನು ಬರೆದ ಕವನಗಳನ್ನೇ ಒಂದಡೆ ಸೇರಿಸಿ ಪುಸ್ತಕ ರೂಪದಲ್ಲಿ ಹೊರತರಲು ಯೋಚಿಸಿದ್ದಾಳೆ. ಇದಕ್ಕೆ ಮನಸ್ವಿ ಕುಟುಂಬಸ್ಥರು ಸಾಥ್ ಕೊಡುತ್ತಿದ್ದಾರೆ.
ಮನಸ್ವಿ ತಂದೆ ಬಸವರಾಜ ಪಾಟೀಲ್ ಡಿಪ್ಲೋಮಾ ಇಂಜಿನಿಯರಿಂಗ್ ಪದವೀಧರರಾಗಿದ್ದು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ, ಓರ್ವ ಸಹೋದರ ಮತ್ತು ಇಬ್ಬರು ಸಹೋದರಿಯರು ಸಹ ಮನಸ್ವಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಯುವ ಸಮೂಹ ಹಾಳಾಗುತ್ತಿದೆ ಅನ್ನೋ ಮಾತಿಗೆ ತದ್ವಿರುದ್ಧವಾಗಿ ಸರಿಯಾದ ರೀತಿಯಲ್ಲಿ ಸಾಮಾಜಿಕ ಜಾಲತಾಣ ಬಳಸಿಕೊಂಡರೆ ಏನೆಲ್ಲಾ ಸಾಧಿಸಬಹುದು ಅನ್ನೋದನ್ನು ಅಂತಾರಾಷ್ಟ್ರಿಯ ಬರಹಗಾರರ ಸಾಲಿನಲ್ಲಿ ನಿಲ್ಲುವ ಮೂಲಕ ಮನಸ್ವಿ ತೋರಿಸಿಕೊಟ್ಟಿದ್ದಾಳೆ.