ಕಲಬುರಗಿ: ಸಾರಿಗೆ ಇಲಾಖೆಯಲ್ಲಿ ಒಂದು ಬಸ್ನ ಜೀವಿತಾವಧಿ ಇಂತಿಷ್ಟು ಕಿಲೋಮೀಟರ್ ಎಂದು ನಿಗದಿಯಾಗಿರುತ್ತದೆ. ಆದರೆ, ಜಿಲ್ಲೆಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 54 ಹಳತಾದ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಆತಂಕ ಎದುರಾಗಿದೆ.
ಜಿಲ್ಲೆಯ ಚಿಂಚೋಳಿ, ಸೇಡಂ, ಕಾಳಗಿ, ಚಿತ್ತಾಪುರ ಹಾಗೂ ಕಲಬುರಗಿಯಲ್ಲಿ ಎರಡು ಘಟಕ ಸೇರಿ ಒಟ್ಟು 6 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 476 ಬಸ್‌ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್ ಹಿನ್ನೆಲೆ 380 ಬಸ್‌ಗಳು ಮಾತ್ರ ರಸ್ತೆಗಿಳಿದಿವೆ.
ನಿಗದಿತ 9 ಲಕ್ಷ ಕಿಲೋ ಮೀಟರ್ ಓಡಾಟದ ಗಡಿ ದಾಟಿದ 54 ಬಸ್‌ಗಳು ಸಹ ರಸ್ತೆಗೆ ಇಳಿಯುತ್ತಿವೆ. ಆದರೆ, ಅಷ್ಟು ಕಿಮೀ ಸಂಚರಿಸಿದ ಬಸ್‌ಗಳು ರಸ್ತೆಗಿಳಿಯುವುದು ಸೂಕ್ತವಲ್ಲ. ಇದು ಪ್ರಯಾಣಿಕರಿಗೂ ಹೆಚ್ಚು ಅಸುರಕ್ಷತೆ. ಯಾವ ಸಂದರ್ಭದಲ್ಲಿ ಬೇಕಾದರೂ ಮಾರ್ಗ ಮಧ್ಯೆ ಕೆಟ್ಟು ನಿಲ್ಲಬಹುದು. ಜೊತೆಗೆ ವಾಯು ಮಾಲಿನ್ಯ ಹೆಚ್ಚು ಸೃಷ್ಟಿಸುತ್ತವೆ. ಅವುಗಳ ದುರಸ್ತಿಗಾಗಿ ಹಣ ಕೂಡಾ ವ್ಯರ್ಥ. ಹೀಗಾಗಿ, ಹಳೆ ಬಸ್ ಓಡಾಟ ನಿಲ್ಲಿಸಿ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹ.
ನಿಗದಿತ 9 ಲಕ್ಷ ಕಿ.ಮೀ ಸಂಚರಿಸಿದ ನಂತರ ಅವುಗಳ ಫಿಟ್ನೆಸ್ ನೋಡಿಕೊಂಡು ರಸ್ತೆಗೆ ಇಳಿಸಲಾಗುತ್ತದೆ. ಉಳಿದ 422 ಬಸ್‌ಗಳ ಸ್ಥಿತಿ ಉತ್ತಮವಾಗಿದೆ. ಶಾಲಾ-ಕಾಲೇಜು ಪ್ರಾರಂಭವಾದ ನಂತರ ಅಗತ್ಯಕ್ಕೆ ತಕ್ಕಂತೆ ಬಸ್ ಓಡಿಸಲಾಗುವುದು. ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) 50 ಹೊಸ ಬಸ್ಗಳಿಗೆ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಬಸ್ ಬಂದ ಬಳಿಕ ಹಳೆಯ ಬಸ್ ಓಡಾಟ ನಿಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.