ಕಲಬುರಗಿ : ಸದ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿಚಾರ ಅಪ್ರಸ್ತುತ. ನಮ್ಮ ಪಕ್ಷಕ್ಕೆ ಬಹುಮತ ಬಂದಾಗ ಸಿಎಲ್ಪಿಯಲ್ಲಿರುವ ಶಾಸಕರು ಹೈಕಮಾಂಡ್‌ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸುತ್ತಾರೆ. ಆಗ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆಯೋ ಅದಕ್ಕೆ ನಾವು ಬದ್ಧರಿದ್ದೇವೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಿ ಪಿ ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು. ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗೋ ಬಗ್ಗೆ ನಾವು ಯೋಚನೆ ಮಾಡಬೇಕಿದೆ. ನಮ್ಮಲ್ಲಿ ಅರ್ಹರು ಬಹಳ ಜನ ಇದ್ದಾರೆ. ಹಾಗಾಗಿ, ಸಿಎಂ ವಿಚಾರ ಚರ್ಚೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರೂ ಇಲ್ಲ.
ಅವರ ಮನೆಯಲ್ಲಿ ಇರೋ ಸಮಸ್ಯೆ ಬಗೆಹರಿಸಿಕೊಳ್ಳಲಿ. ಕಾಂಗ್ರೆಸ್ ಸಿಎಂ ನಿರ್ಧಾರ ಮಾಡುವುದಕ್ಕೆ ಬಿಜೆಪಿಯವರು ಯಾರು.? ಕಾಂಗ್ರೆಸ್ ಹೈಕಮಾಂಡ್ ಅದನ್ನು ನಿರ್ಧಾರ ಮಾಡುತ್ತದೆ ಎಂದು ಗುಡುಗಿದರು. ಜಮೀರ್ ಅಹ್ಮದ್ ಅವರು ವ್ಯೆಯಕ್ತಿಕ ಅಭಿಪ್ರಾಯ ಹೇಳಿದ್ದಾರೆ.
ಆದರೆ, ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕರು ಈ ರೀತಿ ಮಾತಾಡೋದಿಲ್ಲ. ನಮ್ಮ ಮಾತುಗಳಿಂದ ಬೇರೆ ಶಾಸಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಆಲೋಚಿಸಿ ಮಾತನಾಡಬೇಕು ಎಂದು ಶಾಸಕ ಜಮೀರ್ ಅವರಿಗೆ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.
ಇನ್ನು, ಖರ್ಗೆ, ಜಿ.ಪರಮೇಶ್ವರ ಅವರು ಸಿಎಂ ಎಂಬ ಮಾತು ಕೇಳಿ ಬಂದಾಗ ಮಾತ್ರ ದಲಿತ ಸಿಎಂ ವಿಚಾರ ಏಕೆ ಬೆಳೆಕಿಗೆ ಬರುತ್ತೋ ಗೊತ್ತಿಲ್ಲ. ಬೇರೆಯವರು ಸಿಎಂ ಆದಾಗ ಈ ರೀತಿಯ ಚರ್ಚೆಗಳು ಯಾಕೆ ನಡೆಯುವುದಿಲ್ಲವೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.