ಕಲಬುರಗಿ: ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಸಚಿವ ಸ್ಥಾನ ನೀಡದಿದ್ರೆ ಹತ್ತು ಜನ ಶಾಸಕರಿಂದ ರಾಜೀನಾಮೆ ಕೊಡಿಸುವುದಾಗಿ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ನಗರದ ಎನ್.ವಿ.ಮೈದಾನದಲ್ಲಿ ನಡೆದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ಇತ್ತೀಚೆಗೆ ಸ್ವಾಮೀಜಿಗಳ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ರೇವೂರ ಅವರನ್ನು ಸಚಿವರನ್ನಾಗಿ ಮಾಡಲು ಕೇಳಿದ್ದೆವು. ಆದ್ರೆ, ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ, ಒಂದು ವರ್ಷದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾತು ಕೊಟ್ಟಂತೆ ಮುಂದಿನ ವರ್ಷದ ಒಳಗಾಗಿ ದತ್ತಾತ್ರೇಯ ಪಾಟೀಲ್ ರೇವೂರಗೆ ಸಚಿವ ಸ್ಥಾನ ನೀಡಬೇಕು. ಮಂತ್ರಿ ಸ್ಥಾನ ಕೊಡದಿದ್ರೆ ಹತ್ತು ಶಾಸಕರ ರಾಜೀನಾಮೆ ಕೊಡಿಸ್ತೇನೆ. ಆ ಶಕ್ತಿ ನನ್ನ ಬಳಿ ಇದೆ ಎಂದು ಸಿಎಂಗೆ ಬಹಿರಂಗವಾಗಿಯೇ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
20 ವರ್ಷಗಳ ಹಿಂದೆ ಕಲಬುರಗಿಯಲ್ಲಿ ಬಿಜೆಪಿ ಅಂದ್ರೆ ಹಳೆ ನಾಯಿಯೂ ಕೇಳುತ್ತಿರಲಿಲ್ಲ. ದತ್ತಾತ್ರೇಯ ಪಾಟೀಲ್ ಅವರ ತಂದೆ ಚಂದ್ರಶೇಖರ ಪಾಟೀಲ್ ತಮ್ಮ ಆಸ್ತಿಮಾರಿ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದಾರೆ. ಮಂತ್ರಿ ಆಗಬೇಕು ಅಂತ ಆಸೆ ಇಟ್ಟುಕೊಂಡು ಚಂದ್ರಶೇಖರ ಸತ್ತು ಹೋದ್ರು. ಆದ್ರೆ ಇದೇ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ, ಈಗ ಅವರ ಪುತ್ರನಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.