ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ಕೆಲಸ ಮಾಡಿದ ಬಿಜೆಪಿ ನಾಯಕರಿಗೆ ಭಯ ಶುರುವಾಗಿದೆ. ಹಾಗಾಗಿಯೇ ಮೇಲಿಂದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಜೆಪಿ ನಡ್ಡಾ ಅವರನ್ನ ರಾಜ್ಯಕ್ಕೆ ಕರೆತರುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಭಯ ಶುರುವಾಗಿದೆ ಎಂದು ಮುಖ್ಯಮಂತ್ರಿ ಸೇರಿ ಇತರ ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಭಯ ನಮಗಲ್ಲ ಅವರಿಗೆ ಕಾಡುತ್ತಿದೆ. ಭ್ರಷ್ಟಾಚಾರ, ದುರಾಢಳಿತ ಜನ ವಿರೋಧಿ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಹಣ ಕೊಡದೆ ಈ ಸರ್ಕಾರದಲ್ಲಿ ಏನು ಆಗಲ್ಲ ಎಂದು ಜನಾನೇ ಮಾತನಾಡುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸೋಕೆ ಚುನಾವಣೆಗಾಗಿ ಜನ ಕಾಯ್ತಿದ್ದಾರೆ ಎಂದು ಹೇಳಿದರು.
ನಿಜವಾಗಿ ಹೇಳುವುದಾದರೆ ಕಾಂಗ್ರೆಸ್ ಬಗ್ಗೆ ಅವರಿಗೆ ಭಯ ಕಾಡುತ್ತಿದೆ. ಅದಕ್ಕಾಗಿಯೇ ರಾಜ್ಯ ಬಿಜೆಪಿ ಮುಖಂಡರು ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಪದೇ ಪದೆ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ವಸ್ತುಸ್ಥಿತಿ ಹೀಗಿರುವಾಗ ನಮಗ್ಯಾಕೆ ಅವರ ಭಯ ಇರುತ್ತೆ ಹೇಳಿ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇವರಿಗೆ ಇವತ್ತಿನವರೆಗೂ ಜನರಿಗೆ ಒಂದು ಮನೆ ಕೊಡಲು ಆಗಲಿಲ್ಲ ಹಾಗಾಗಿ ಅವರಿಗೆ ಈ ಚುನಾವಣೆಯಲ್ಲಿ ಬಾರಿ ಗೆಲ್ಲುತ್ತೇವೋ ಇಲ್ಲವೋ ಎನ್ನುವ ಭಯ ಶುರುವಾಗಿದೆ ಎಂದರು.
ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ: ಒಂದು ಚಡ್ಡಿ ಕೊಂಡರೆ ಮತ್ತೊಂದು ಚಡ್ಡಿ ಫ್ರೀ ಎನ್ನುವಂತಹ ಭಾಗ್ಯಗಳನ್ನು ಕಾಂಗ್ರೆಸ್ ಘೋಷಿಸುತ್ತಾ ಹೊರಟಿದೆ ಎಂದು ವ್ಯಂಗ್ಯವಾಡಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ವಿಪಕ್ಷ ನಾಯಕ, ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. ಅವರೇನಿದ್ದರೂ ಬರೀ ಸುಳ್ಳುಗಳನ್ನು ಹೇಳುತ್ತಾರೆ. ಇಷ್ಟಕ್ಕೂ ಗುಲ್ಬರ್ಗ, ಮುಂಬೈ - ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ? ಎಂದು ಪ್ರಶ್ನಿಸಿದರು.
ಸಮಯದ ಅಭಾವದಿಂದಾಗಿ ಪ್ರತ್ಯೇಕ ಗುಂಪುಗಳ ರಚನೆ: ಇದಕ್ಕೂ ಮುನ್ನ ಪ್ರಜಾಧ್ವನಿ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಜ್ಯದೆಲ್ಲಡೆ ಪ್ರಜಾಧ್ವನಿ ಚೆನ್ನಾಗಿ ನಡೆಯುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಜನ ಒಳ್ಳೆ ಉತ್ಸಾಹ ತೋರುತ್ತಿದ್ದಾರೆ. ಆದರೆ ಸಮಯದ ಅಭಾವದಿಂದಾಗಿ ಪ್ರತ್ಯೇಕ ಗುಂಪುಗಳನ್ನು ರಚನೆ ಮಾಡಿಕೊಂಡು ಪ್ರಜಾಧ್ವನಿ ಯಾತ್ರೆಗೆ ಹೋಗುತ್ತಿರುವದಾಗಿ ತಿಳಿಸಿದರು.
ಇಂದು ಯಾದಗಿರಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಎಲ್ಲಾ ನಾಯಕರು ವಿಶೇಷ ವಿಮಾನದ ಮೂಲಕ ಆಗಮಿಸಿದ್ದಾರೆ. ಬಳಿಕ ವಿಮಾನ ನಿಲ್ದಾಣದಿಂದ ಪ್ರಜಾಧ್ವನಿ ವಿಶೇಷ ಬಸ್ ಮೂಲಕ ಯಾದಗಿರಿಗೆ ತೆರಳಿದರು. ತದನಂತರ ಕಲಬುರಗಿ ಆಗಮಿಸಿ ಸಂಜೆ 5-30ಕ್ಕೆ ವಿಶೇಷ ವಿಮಾನದ ಮೂಲಕ ಎಲ್ಲಾ ನಾಯಕರು ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ವಿಧಾನಪರಿಷತ್ ವಿರೋದ ಪಕ್ಷದ ನಾಯಕ ಬಿಕೆ ಹರಿಪ್ರಸಾದ, ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ವಕ್ತಾರ ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ನಾಯಕರು ಪ್ರಜಾಧ್ವನಿಯಲ್ಲಿ ಪಾಲ್ಗೊಳ್ಳಲು ಬಸ್ ಮುಖಾಂತರ ತೆರಳಿದರು.
ಇದನ್ನೂ ಓದಿ: ಕಾಂಗ್ರೆಸ್ನವರು ಮೋದಿ ಟೀಕೆ ಮಾಡಿದ್ರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ: ಕೆ ಎಸ್ ಈಶ್ವರಪ್ಪ