ಕಲಬುರಗಿ: ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ರಾಜ್ಯ ಕಂಡ ಮಹಾನ್ ಮೋಸಗಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ.
‘ಸಿದ್ದರಾಮಯ್ಯ ಮತ್ತೆ ಮೈಸೂರಿನತ್ತ’
ನಗರದ ಏರ್ಪೋರ್ಟ್ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗುವ ಮುನ್ನ ದೊಡ್ಡ ಮಟ್ಟದಲ್ಲಿ ಅಹಿಂದ ಹೋರಾಟ ಮಾಡಿದರು. ಸಿಎಂ ಆದ ನಂತರ ಅಹಿಂದ ಕೈಬಿಟ್ಟರು. ಮತ್ತೆ ಇದೀಗ ಸಿಎಂ ಆಗಲು ಅಹಿಂದ ಮಂತ್ರ ಪಠಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವರುಣ ಕ್ಷೇತ್ರದಿಂದ ಸಿದ್ದರಾಮಯ್ಯನನ್ನು ಜನ ಓಡಿಸಿದ್ರು. ಈಗ ಬಾದಾಮಿ ಕ್ಷೇತ್ರದಿಂದಲೂ ಓಡಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತೆ ಮೈಸೂರಿನತ್ತ ಮುಖ ಮಾಡಲು ಸಜ್ಜಾಗಿದ್ದಾರೆ ಎಂದರು.
‘ಸಿಎಂ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಆಟ’
ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಮ್ಯೂಸಿಕಲ್ ಕುರ್ಚಿ ಆಟ ನಡೆಯುತ್ತಿದೆ. ಗುಂಪುಗಾರಿಕೆ ಜೋರಾಗಿದೆ. ಸಿಎಂ ಕುರ್ಚಿ ಏರಲು ಹಲವರು ಈಗಾಗಲೇ ಟವೆಲ್ ಹಾಕಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಿದ್ದಾರೆ. ಮತ್ತೊಂದೆಡೆ ಡಿಕೆಶಿ ಸಿಎಂ ಆಗಬೇಕು ಅಂತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ವಿಷಯ ಜೋರಾಗಿ ಕೇಳಿ ಬರ್ತಿದೆ. ಆದರೆ, ಬಿಜೆಪಿಯಲ್ಲಿ ಮುಂದಿನ ಸಿಎಂ ಕುರಿತಂತೆ ಯಾವುದೇ ಗೊಂದಲಗಳಿಲ್ಲ ಎಂದು ಕಟೀಲು ಸ್ಪಷ್ಟನೆ ನೀಡಿದ್ರು.
‘ಅಭಿವೃದ್ಧಿ ವಿಚಾರವಾಗಿ ಶಾಸಕರು ದೆಹಲಿ ಭೇಟಿ’
ಇದೇ ವೇಳೆ ಸಿಎಂ ಬೆಂಬಲಿಗ ಶಾಸಕರು ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಶಾಸಕರು ದೆಹಲಿ ಸೇರಿದಂತೆ ಎಲ್ಲೆಡೆ ಹೋಗುವ ಅವಕಾಶವಿದೆ. ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಲಸಿಕೆ ಕೊರತೆಯಿಲ್ಲ’
ದೇಶದ ಯಾವುದೇ ರಾಜ್ಯದಲ್ಲಿ ಕೊರೊನಾ ಲಸಿಕೆ ಸಮಸ್ಯೆಯಿಲ್ಲ. ಈ ಹಿಂದೆ ಎರಡು ಲಸಿಕೆ ಉತ್ಪಾದನೆ ಕೇಂದ್ರಗಳಿದ್ದವು. ಆದರೆ ಈಗ ದೇಶದಲ್ಲಿ ಐದು ಲಸಿಕಾ ಉತ್ಪಾದನೆ ಕೇಂದ್ರಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ತಿಳಿಸಿದ್ದಾರೆ.
ಇದನ್ನೂ ಓದಿ:Covid ನಿಯಮ ಉಲ್ಲಂಘನೆ: ಪಂಕಜಾ ಮುಂಡೆ ಸೇರಿ 42 ಜನರ ವಿರುದ್ಧ FIR