ಕಲಬುರಗಿ: ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಹೋಗುತ್ತೇನೆ, ತಾಕತ್ತಿದ್ದರೆ ತಡೆಯಿರಿ ಎಂಬ ಶಾಸಕಿ ಖನೀಜಾ ಫಾತಿಮಾ ಹೇಳಿಕೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕೇಸರಿ ಶಾಲು ಧರಿಸಿ ನಗರದ ಎಸ್ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನೂರಾರು ಜನ, ವಿದ್ಯಾರ್ಥಿಗಳು ಬೇಡವೇ ಬೇಡ ಹಿಜಾಬ್ ಬೇಡ ಎಂದು ಘೋಷಣೆ ಕೂಗಿದರು.
ನಂತರ ಮಾತನಾಡಿದ ಆಂದೋಲ ಶ್ರೀ, ಕೋಮು ಗಲಭೆ ಕೆರಳಿಸುವಂತಹ ಶಾಸಕಿ ಖನೀಜ್ ಫಾತಿಮಾ ಅವರ ಮತ್ತೊಂದು ಮುಖ ಅನಾವರಣವಾಗಿದೆ. ಇಷ್ಟು ದಿನ ಶಾಸಕಿ ಫಾತಿಮಾ ಅವರು ವಿಧಾನಸೌಧಕ್ಕೆ ಹಾಗೆ ಹೋಗಿದ್ರಾ?. ಚೂಡಿದಾರ ಧರಿಸಿ ಹೋಗಿದ್ರಾ? ಅಥವಾ ಸೀರೆ ಧರಿಸಿಕೊಂಡು ಹೋಗಿದ್ರಾ? ಎಂದು ವಿವಾದಾತ್ಮಕವಾಗಿ ಪ್ರಶ್ನಿಸಿ, ವಾಗ್ದಾಳಿ ನಡೆಸಿದರು.
ಸರ್ಕಾರಿ, ಖಾಸಗಿ ಶಾಲೆಯಲ್ಲಿ ಹಿಜಾಬ್ ನಿಷೇಧಿಸಬೇಕು: ಶಾಲೆ ವಿದ್ಯಾಕೇಂದ್ರ. ಹಿಜಾಬ್ ಧರಿಸಿ ಪಾಠ ಕಲಿಯಬೇಕು ಅಂದರೆ ತಾಲಿಬಾನ್ ಗೋ ಅಥವಾ ಪಾಕಿಸ್ತಾನಕ್ಕೋ ಹೋಗಬೇಕು. ಶಾಲೆಯಲ್ಲಿ ವಸ್ತ್ರ ಸಂಹಿತೆ ಪಾಲಿಸದಿದ್ದರೆ ಅವರನ್ನು ಶಾಲೆಯಿಂದ ವಜಾ ಮಾಡಬೇಕು. ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು, ಎಲ್ಲರೂ ಸರ್ಕಾರದ ಆದೇಶ ಪಾಲಿಸಬೇಕು ಎಂದು ಆಗ್ರಹಿಸಿದರು.