ಕಲಬುರಗಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮಮಂದಿರಕ್ಕೆ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರು 25 ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.
ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ನಿಧಿ ಸಂಗ್ರಹ ರಸೀದಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂಗಳ ಆರಾಧ್ಯದೈವ ಶ್ರೀರಾಮನ ಮಂದಿರಕ್ಕೆ ಶರಣಬಸವೇಶ್ವರ ಸಂಸ್ಥಾನದ ವತಿಯಿಂದ 25 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದಾರೆ. ಬರುವ 17 ರಿಂದ ಕಲಬುರಗಿ ಜಿಲ್ಲೆಯಾದ್ಯಂತ ವಿಶ್ವಹಿಂದೂ ಪರಿಷತ್ತಿನ 5 ಸಾವಿರ ಜನ ಕಾರ್ಯಕರ್ತರು ಮನೆ- ಮನೆಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಲಿದ್ದಾರೆ. ಶ್ರೀರಾಮನ ಭಕ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಶ್ರೀರಾಮ ಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ದೇಣಿಗೆ ಸಂಗ್ರಹ ರಸೀದಿ ಮುದ್ರಿಸಲಾಗಿದ್ದು, ಹತ್ತು, ನೂರು, ಸಾವಿರ ಹೀಗೆ ತಮ್ಮ ಭಕ್ತಿಗೆ ತಕ್ಕಂತೆ ಮುಕ್ತ ಮನಸ್ಸಿನಿಂದ ದೇಣಿಗೆ ನೀಡುವಂತೆ ಶರಣಬಸಪ್ಪ ಅಪ್ಪ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿದ ಆರ್ಎಸ್ಎಸ್ ಪ್ರಮುಖ ಕೃಷ್ಣ ಜೋಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ವಿಶ್ವ ಹಿಂದೂ ಪರಿಷತ್ ಘೋಷಿಸಿದೆ. ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕಾಗಿ ನಾಲ್ಕು ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬಗಳನ್ನು ಪರಿಷತ್ತಿನ ಸದಸ್ಯರು ತಲುಪಲಿದ್ದಾರೆ ಎಂದು ತಿಳಿಸಿದ್ದಾರೆ.