ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದನ್ನು ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರು ತೀವ್ರವಾಗಿ ಖಂಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರಕರ್ನಾಟಕ ಜನ ನೆರೆಯಿಂದ ತತ್ತರಿಸಿದ್ದಾರೆ. ಕೇಂದ್ರ ಪರಿಹಾರ ನೀಡಲು ವಿಳಂಬ ಧೋರಣೆ ತೋರಿದ ಹಿನ್ನೆಲೆ ಯತ್ನಾಳ್ ಧ್ವನಿ ಎತ್ತಿದ್ದು ತಪ್ಪಾ? ಇದಕ್ಕೆ ಬಿಜೆಪಿ ಶಿಸ್ತು ಪಾಲನಾ ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು ಎಷ್ಟರಮಟ್ಟಿಗೆ ಸರಿ? ಎಂದು ಖಾರವಾಗಿ ಪ್ರಶ್ನಿಸಿದರು.
ಇದೇ ವೇಳೆ, ಚಕ್ರವರ್ತಿ ಸೂಲಿಬೆಲೆಗೆ ದೇಶವಿರೋಧಿ ಪಟ್ಟ ನೀಡಿರುವ ಕೇಂದ್ರ ಸಚಿವ ಸಂದಾನಂದಗೌಡ ವಿರುದ್ಧವೂ ಕಿಡಿಕಾರಿದರು. ಸೂಲಿಬೆಲೆ ಚಕ್ರವರ್ತಿ ವಿರುದ್ಧ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಸದಾನಂದಗೌಡರು ಬಹಿರಂಗ ಕ್ಷಮೆಯಾಚಿಸುವಂತೆ ಶ್ರೀಗಳು ಆಗ್ರಹಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೆಲ ಬಿಜೆಪಿ ನಾಯಕರಿಂದ ಸಂಚು ರೂಪಿಸಲಾಗ್ತಿದೆ. ವೀರಶೈವ ಲಿಂಗಾಯತರನ್ನು ತುಳಿಯಲು ಸದ್ದಿಲ್ಲದೆ ಕಸರತ್ತು ನಡೆದಿದೆ ಎಂದು ಆರೋಪಿಸಿದ ಶ್ರೀಗಳು, ವೀರಶೈವ ಲಿಂಗಾಯತರ ವಿರೋಧಿ ನಡೆ ತಿದ್ದಿಕೊಳ್ಳದಿದ್ರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.