ಕಲಬುರ್ಗಿ: ಇನ್‌ಟ್ಯಾಕ್ ಹಾಗೂ ಮಹಾನಗರ ಪಾಲಿಕೆ ಕಲಬುರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಕಲಬುರ್ಗಿ ನಗರದ ಐತಿಹಾಸಿಕ ಸ್ಮಾರಕವಾದ ಶಹಾ ಬಜಾರ ಮಸೀದಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಇತಿಹಾಸ ಪ್ರಾಧ್ಯಾಪಕರು ಹಾಗೂ ಇನ್‌ಟ್ಯಾಕ್ ಸಂಚಾಲಕರು ಆದ ಡಾ. ಶಂಭುಲಿಂಗ ಎಸ್ ವಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ಕಲಬುರ್ಗಿ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಅವುಗಳಲ್ಲಿ ಕೆಲವು ವಿಶ್ವ ಪ್ರಸಿದ್ಧಿ ಹೊಂದಿವೆ. ಆದರೆ, ಯಾವ ಸ್ಮಾರಕದ ಸುತ್ತಲೂ ಸ್ವಚ್ಛವಾದ ಪರಿಸರವಿಲ್ಲದಿರುವುದು ಪ್ರವಾಸಿಗರನ್ನ ಇತ್ತ ಬಾರದಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಒಂದು ವೇಳೆ ಸ್ಮಾರಕಗಳ ಸುತ್ತಲೂ ಸ್ವಚ್ಛಪರಿಸರ, ಹುಲ್ಲಿನ ಹಾಸಿಗೆ, ಗಿಡಮರಗಳು ಹಾಗೂ ಮೂಲಸೌಕರ್ಯಗಳು ಇದ್ದರೆ ಮುಂದಿನ ದಿನಗಳಲ್ಲಿ ದೇಶಿ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂದು ಅಭಿಪ್ರಾಯಪಟ್ಟರು.
ಬಹುಮನಿ ಸುಲ್ತಾನರ ಕಾಲದಿಂದಲೂ ಇಲ್ಲಿದೆ ಶಹಬಜಾರ್: ಇಂದಿಗೂ ಕಲಬುರ್ಗಿಯ ಪ್ರಸಿದ್ಧ ಮಾರುಕಟ್ಟೆ ಪ್ರಸ್ತುತ ಶಹಾಬಜಾರ್ ಮಸೀದಿಯು ಕ್ರಿ.ಶ 1365ರಲ್ಲಿ ಬಹಮನಿ ಸುಲ್ತಾನ ಒಂದನೇಯ ಮಹಮ್ಮದ್ ಶಹಾನು ನಿರ್ಮಿಸಿದ್ದ. ಇಲ್ಲಿ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತಿತ್ತು ಎಂದು ವಿದೇಶಿ ಯಾತ್ರಿಕರಾದ ನಿಕಿಟಿನ್ ಹಾಗೂ ಅಬ್ದುಲ್ ರಜಾಕರ ಅವರು ತಮ್ಮ ಪ್ರವಾಸ ಕಥನದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಕುದುರೆ ವ್ಯಾಪಾರ ಹಾಗೂ ಯುದ್ಧ ಸಾಮಾಗ್ರಿಗಳು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ ನಡೆಯುತ್ತಿತ್ತು. ಆದ್ದರಿಂದಲೇ ಇದನ್ನು ಶಹಬಜಾರ್ ಎಂದು ಕರೆಯಲಾಗಿದೆ ಎಂದು ಡಾ.ವಾಣಿಯವರು ಹೇಳಿದರು.
ಉಪನ್ಯಾಸದ ನಂತರ ಮಹಾನಗರ ಪಾಲಿಕೆಯ ಕಾರ್ಮಿಕರೊಂದಿಗೆ ಸ್ಮಾರಕ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪಾಲಿಕೆಯ ಪೌರಕಾರ್ಮಿಕರು ಶಹಬಾಜಾರ್ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಪ್ರೇಮ ಮೆರೆದರು. ಕಾರ್ಯಕ್ರಮದಲ್ಲಿ ಕಲಬುರ್ಗಿ ಪಾಲಿಕೆಯ ಸಿಬ್ಬಂದಿ ಹನುಮಂತ ನಿಂಬಾಳ್ಕರ್, ಜಸವೀರಸಿಂಗ್, ಪ್ರಾಚ್ಯಾವಸ್ತು ಇಲಾಖೆ ಅಧಿಕಾರಿಗಳಾದ ಶಬೀರ್ ಅಲಿ, ಅಬ್ದುಲ್ ಅಜೀಜ್, ಪ್ರಾಧ್ಯಾಪಕರಾದ ಡಾ.ಮಹಾದೇವ ಬಡಿಗೇರ, ಇನ್‌ಟ್ಯಾಕ್ ಸಹ ಸಂಚಾಲಕರಾದ ಡಾ. ಎಂ ಎಸ್ ಕುಂಬಾರ, ಡಾ. ಶ್ರೀನಾಥ ಮುತ್ತಕೋಡ, ಪ್ರೊ. ಶರಣಪ್ಪ, ಪ್ರೊ. ರವಿಕುಮಾರ ಹಾಗೂ ಪೌರ ಕಾರ್ಮಿಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.