ಸೇಡಂ(ಕಲಬುರಗಿ): ಕೇಂದ್ರ ಸರ್ಕಾರ ಜೂನ್ 8ರಿಂದ ದೇವಾಲಯ ತೆರೆಯುವಂತೆ ಸೂಚಿಸಿದೆ. ಈ ಕುರಿತು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದೀಗ ದೇವಾಲಯಗಳಲ್ಲಿ ನಮಸ್ಕರಿಸಲು ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಸೇಡಂ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.
ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ವಿವಿಧ ದೇವಾಲಯಗಳ ಅರ್ಚಕರು, ಪ್ರಮುಖರ ಸಭೆ ನಡೆಸಿ ಮಾತನಾಡಿದ ಅವರು, ಎರಡು ತಿಂಗಳಿನಿಂದ ನಿಷೇಧಿಸಲಾಗಿದ್ದ ದೇವಾಲಯಗಳನ್ನ ತೆರೆಯಲು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ದೇವಾಲಯಗಳಲ್ಲಿ ನಮಸ್ಕರಿಸಲು ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ತಾಲೂಕಿನ 94 ದೇವಾಲಯಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸುವ ವ್ಯವಸ್ಥೆ ಮಾಡಬೇಕು. ಅಲ್ಲದೆ, ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ದೇವಾಲಯ ಆವರಣದಲ್ಲಿ ಗುಂಪು-ಗುಂಪಾಗಿ ಸೇರಿ ಊಟ ಮಾಡುವಂತಿಲ್ಲ. ಗರ್ಭಿಣಿಯರು,10 ವರ್ಷ ಕೆಳಗಿನ ಮತ್ತು 65 ವರ್ಷ ಮೇಲ್ಪಟ್ಟವರು ದೇವಾಲಯಕ್ಕೆ ಬರಲು ನಿರ್ಬಂಧ ಹೇರಲಾಗಿದೆ. ಅಲ್ಲದೆ, ದೇವಾಲಯದ ಅರ್ಚಕರು ಭಕ್ತರಿಂದ ಕನಿಷ್ಠ 7 ಮೀಟರ್ ಅಂತರ ಕಾಯ್ದುಕೊಳ್ಳಬೇಕು ಎಂದರು.
ಇದೇ ವೇಳೆ ಉತ್ತರಾಧಿ ಮಠದ ಮುಖ್ಯ ಅರ್ಚಕ ವೆಂಕಣ್ಣಾಚಾರ್ ಮಾತನಾಡಿ,ಸರ್ಕಾರ ಆದೇಶ ನೀಡಿದ ದಿನದಂದೇ ಮಳಖೇಡದ ಉತ್ತರಾಧಿ ಮಠವನ್ನ ತೆರೆಯಲ್ಲ. ಬದಲಿಗೆ 15 ದಿನಗಳ ನಂತರ ತೆರೆಯಲಾಗುವುದು. ಅದಕ್ಕಾಗಿ ಭಕ್ತರು ಸಹಕರಿಸಬೇಕು. ಮಠ ಭಕ್ತರಿಗೆ ಮುಕ್ತವಾಗಿಸುವ ದಿನಾಂಕ ತಿಳಿಸಲಾಗುವುದು ಎಂದರು.