ಸೇಡಂ: ಜನವಸತಿ ಪ್ರದೇಶಗಳು ಕುಡುಕರ ಅಡ್ಡೆಗಳಾಗಿ ಮಾರ್ಪಾಡಾಗಿದ್ದು, ರಸ್ತೆಯಲ್ಲಿ ಸಂಚರಿಸಲು ಜನ ಭಯಪಡುತ್ತಿದ್ದಾರೆ. ಪಟ್ಟಣದ ಲಕ್ಷ್ಮಿನಾರಾಯಣ ಮಂದಿರ ರಸ್ತೆಯ ಹಲವು ತಿಂಗಳಿಂದ ಸ್ಥಗಿತಗೊಂಡಿರುವ ಪುರಸಭೆಯ ನಿರ್ಮಾಣ ಹಂತದ ಕಟ್ಟಡ ಕುಡುಕರ ಅಡ್ಡೆಯಾಗಿದೆ. ಅಲ್ಲಿ ಎಲ್ಲೆಂದರಲ್ಲಿ ಕುಡಿದು ಬಿಸಾಡಿದ ಬಾಟಲಿಗಳು ಕಣ್ಣಿಗೆ ರಾಚುತ್ತಿವೆ.
ಕಟ್ಟಡ ಪ್ರದೇಶದ ಸುತ್ತಲೂ ಲೇಡಿಸ್ ಕಾರ್ನರ್, ಬಟ್ಟೆ ಅಂಗಡಿ, ಜನರಲ್ ಸ್ಟೋರ್, ಬ್ಯೂಟಿ ಪಾರ್ಲರ್, ಟೈಲರ್ ಅಂಗಡಿಗಳಿವೆ. ಕಟ್ಟಡದ ಮುಂಭಾಗ ಪ್ರತಿನಿತ್ಯ ಸಂಚರಿಸುವ ಮಹಿಳೆಯರು, ಕುಡುಕರ ಕಾಟದಿಂದ ಭಯದ ನೆರಳಲ್ಲಿ ಬದುಕುವ ಅನಿವಾರ್ಯತೆ ಎದುರಾಗಿದೆ.
ಲೋಹಾರ ಗಲ್ಲಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮಾಜಿ ಉಪಸಭಾಪತಿ ಚಂದ್ರಶೇಖರ್ ರೆಡ್ಡಿ, ದೇಶಮುಖ ಮದನಾ ಮನೆಯ ಹಿಂಭಾಗದ ರಸ್ತೆಯೂ ಕುಡುಕರ ಫೇವರಿಟ್ ತಾಣವಾಗಿದೆ. ಹಗಲಲ್ಲೇ ಕುಡುಕರು ಯಾರ ಹಂಗಿಲ್ಲದೆ ಮದ್ಯ ಸೇವಿಸಿ, ಗುಟ್ಕಾ ತಿಂದು ಉಗುಳುವುದು, ಮದ್ಯದ ಪ್ಯಾಕೆಟ್ ಮತ್ತು ಬಾಟಲಿ ಬಿಸಾಡುವುದು ಮುಂತಾದ ಅನೈತಿಕ ಕೃತ್ಯಗಳನ್ನು ಎಸಗುತ್ತಿದ್ದಾರೆ..
ಪುರಸಭೆಯ ಕಟ್ಟಡ ಕುಡುಕರ ಪಾಲಾದಂತಾಗಿದೆ. ರಸ್ತೆಯಲ್ಲಿ ಮಹಿಳೆಯರು ಆತಂಕದಲ್ಲಿ ಸಂಚರಿಸುವಂತಾಗಿದೆ. ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶಾಸಕರೂ ಖುದ್ದು ಸಮಸ್ಯೆ ನೋಡಿ ಪುರಸಭೆಗೆ ಸೂಚಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಉದ್ಯಮಿ ರಮೇಶ ಮಾಲಪಾಣಿ.
ಲೋಹಾರಗಲ್ಲಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಡುಕರು ಹಗಲಲ್ಲೇ ತಮ್ಮ ಬಿಡಾರ ಹೂಡುತ್ತಿದ್ದಾರೆ. ಕೂಡಲೇ ಸಮೀಪದಲ್ಲಿರುವ ಮದ್ಯದಂಗಡಿಯನ್ನು ಬೇರೆಡೆ ಸ್ಥಳಾಂತರಿಸಿ ನಿವಾಸಿಗಳ ಸಮಸ್ಯೆ ಪರಿಹಾರ ಕಲ್ಪಿಸಬೇಕು ಎಂದು ದೂರುತ್ತಾರೆ ನಿವಾಸಿ ಕೃಷ್ಣಾ ಲಡ್ಡಾ.