ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ಒಂದೊಂದು ದಂಧೆಗೆ ಇಂತಿಷ್ಟು ಅಂತ ಮಾಮೂಲು ಫಿಕ್ಸ್ ಮಾಡಲಾಗಿದೆ. ರಕ್ಷಕರೇ ಹಣದಾಸೆಗೆ ಜಿಲ್ಲೆಯನ್ನು ಬಲಿ ಕೊಡುತ್ತಿದ್ದು, ಇದಕ್ಕೆ ಆಡಳಿತ ಪಕ್ಷದ ಕೃಪಾಕಟಾಕ್ಷವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಕೆಲ ಜನಪ್ರತಿನಿಧಿಗಳ ಜೊತೆಗೂಡಿ ಪೊಲೀಸರು ಅಕ್ರಮ ದಂಧೆಗಳಿಗೆ ಸಾಥ್ ನೀಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ವಸೂಲಿಯ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿ, ವಸೂಲಿ ರೇಟ್ ಕಾರ್ಡ್ ಪೋಸ್ಟ್ ಮಾಡಿದ್ದಾರೆ. ವೈನ್ ಶಾಪ್, ಗುಟ್ಕಾ ವ್ಯವಹಾರ, ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಾಣಿಕೆ, ಅಕ್ರಮ ಮರಳು ದಂಧೆ, ಇಸ್ಪೀಟ್ ಅಡ್ಡೆ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಗೆ 1 ಲಕ್ಷದಿಂದ 12 ಲಕ್ಷ ರೂಪಾಯಿವರೆಗೂ ತಿಂಗಳಂತೆ ಹಫ್ತಾ ವಸೂಲಿಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಅವರು ಪೋಸ್ಟ್ ಮೂಲಕ ಆರೋಪಿಸಿದ್ದಾರೆ.
* ಗುಟ್ಕಾ ವ್ಯವಹಾರದಿಂದ ಪ್ರತಿ ತಿಂಗಳು 5 ಲಕ್ಷ
* ಅಕ್ರಮ ಅಕ್ಕಿ ಮಾರಾಟ ಹಾಗೂ ಸಾಗಾಣೆದಾರರಿಂದ ಪ್ರತಿ ತಿಂಗಳು 6 ಲಕ್ಷ.
* ಅಕ್ರಮ ಮರಳು ದಂಧೆಯಿಂದ ಪ್ರತಿ ತಿಂಗಳು 12 ಲಕ್ಷ ರೂಪಾಯಿ.
* ಇಸ್ಪೀಟ್ ಅಡ್ಡೆಗಳ ಮಾಲೀಕರಿಂದ 5 ಲಕ್ಷ ರೂಪಾಯಿ.
* ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟವರಿಂದ 1 ಲಕ್ಷ ರೂಪಾಯಿ.
ಹೀಗೆ ಆಯಾ ಅಕ್ರಮ ಚಟುವಟಿಕೆಗಳಿಗೆ ತಕ್ಕಂತೆ ರೇಟ್ ಪಿಕ್ಸ್ ಮಾಡಿ ಲಂಚ ವಸೂಲಿ ಮಾಡಲಾಗುತ್ತಿದೆ. ಆಡಳಿತ ಪಕ್ಷದಿಂದ ಕಲಬುರಗಿ ಜಿಲ್ಲೆ ಸಂಪೂರ್ಣ ಅಕ್ರಮ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರೋತ್ಸಾಹಿಸುತ್ತಿರುವವರು ಯಾರು?
ಇತ್ತೀಚೆಗೆ ಬೆಂಗಳೂರು ಪೊಲೀಸರಿಂದ ಅಕ್ರಮ ಗಾಂಜಾ ಅಡ್ಡೆ ಮೇಲೆ ದಾಳಿ ನಡೆಯಿತು ಹಾಗೂ ಸೋಲಾಪುರ ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನ ಬಂಧಿಸಿದರು. ಇದನ್ನೆಲ್ಲಾ ಗಮನಿಸಿದರೆ ಕಲಬುರಗಿ ಪೊಲೀಸರು ಮಾಡುತ್ತಿರುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಅಕ್ರಮಗಳ ದಾಖಲೆ ನಮ್ಮ ಬಳಿ ಇವೆ. ಕಲಬುರಗಿಗೆ ಬಂದು ಸಭೆ ಮಾಡಿ ದಾಖಲೆಗಳನ್ನು ನೀಡುತ್ತೇನೆ ಎಂದಿದ್ದಾರೆ.