ಕಲಬುರಗಿ: ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್, ನಿವೃತ್ತ ಬಿಇಒ ಮನೆಗಳಿಗೆ ಕನ್ನ ಹಾಕಿರುವ ಖದೀಮರು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ನಗ ನಾಣ್ಯ ಕದ್ದು ಪರಾರಿಯಾಗಿರುವ ಘಟನೆ ನಗರದ ಗುಬ್ಬಿ ಕಾಲೋನಿಯಲ್ಲಿ ನಡೆದಿದೆ.
ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಮಾರುತಿ ಗೋಖಲೆ ಎಂಬುವರ ಮನೆಯಲ್ಲಿ ನಗದು ಸೇರಿದಂತೆ ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಿವೃತ್ತ ಬಿಇಒ ರೇವಣಸಿದ್ದಪ್ಪ ಎಂಬುವರ ಮನೆಯಲ್ಲಿ ದೇವರ ಬೆಳ್ಳಿ ಮೂರ್ತಿ, ನಗದು ಸೇರಿ ಹತ್ತು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಮಾರುತಿ ಗೋಖಲೆ ಕುಟುಂಬ ಹಾಗೂ ರೇವಣಸಿದ್ದಪ್ಪ ಅವರ ಕುಟುಂಬ ಬೆಂಗಳೂರಿಗೆ ಹೋಗಿದ್ದನ್ನು ಗಮನಿಸಿ, ಕಳ್ಳರು ಮನೆಯ ಬೀಗ ಮುರಿದು ಕೊಳ್ಳೆ ಹೊಡೆದಿದ್ದಾರೆ. ರೇವಣಸಿದ್ದಪ್ಪ ಅವರ ಮನೆಯ ಹಿಂಭಾಗದ ಕಿಟಕಿಯ ಕಬ್ಬಿಣದ ಗ್ರಿಲ್ನ ಸ್ಕ್ರೂ ಹೊರತೆಗೆದು ಒಳಹೊಕ್ಕ ಕಳ್ಳರು ಸುಮಾರು 10 ಲಕ್ಷ ಮೌಲ್ಯದ ನಗ ನಾಣ್ಯ ದೋಚಿ ಬಳಿಕ ಫ್ರಿಡ್ಜ್ನಲ್ಲಿದ್ದ ಸಿಹಿ ತಿಂಡಿ, ಹಣ್ಣು ತಿಂದು ಬಿಸಾಡಿ ಪರಾರಿಯಾಗಿದ್ದಾರೆ.
ಇನ್ನು ಎರಡು ಮನೆಗಳಲ್ಲಿ ನಡೆದ ಕಳ್ಳತನ ಸಂಬಂಧ ನಗರದ ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಖದೀಮರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.