ಕಲಬುರಗಿ: ಕೇಂದ್ರ ಸರ್ಕಾರದ ಆದೇಶ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ದೊರಕಿಸಿಕೊಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಅವರಿಗೆ ಪತ್ರ ಬರೆದಿರುವ ಶಾಸಕರು, ಕೇಂದ್ರದಲ್ಲಿರುವ ರಾಜ್ಯದ ಓಬಿಸಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 6 ಹಾಗೂ ರಾಜ್ಯದಲ್ಲಿನ ಓಬಿಸಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 88 ( H) ನಲ್ಲಿ ಬರುವ ತಳವಾರ ಹಾಗೂ ಪರಿವಾರ ಸಮೂದಾಯಗಳು ಎಸ್ಟಿ ಪಟ್ಟಿಯಲ್ಲಿರುವ ನಾಯಕ ಹಾಗೂ ನಾಯ್ಕಡ ಸಮುದಾಯಗಳ ಸಮನಾಂತರ ಪದಗಳೆಂದು ಸದರಿ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಕರ್ನಾಟಕ ರಾಜ್ಯ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ದಿನಾಂಕ 25-02-2014 ರಂದು ಪ್ರಸ್ತಾವನೆ ಸಲ್ಲಿಸಿತ್ತು.
ಈ ಪ್ರಸ್ತಾವನೆಯನ್ನು ಮಾನ್ಯ ಮಾಡಿದ ಕೇಂದ್ರ ಸರ್ಕಾರ ದಿನಾಂಕ 12-02-2020 ರಂದು ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡು ನಂತರ ರಾಷ್ಟ್ರಪತಿಗಳ ಅಂಕಿತ ಪಡೆದುಕೊಳ್ಳಲಾಯಿತು. ತರುವಾಯ, ದಿನಾಂಕ 20.03.2020 ರಂದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಎಸ್ಟಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 38 ರಲ್ಲಿ ನಾಯಕ, ನಾಯ್ಕೊಡ ಜಾತಿಗೆ ಸಮನಾರ್ಥಕ ಪದಗಳಾದ ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಗೆಜೆಟ್ ಪ್ರಕಟಿಸಿ ತಿದ್ದುಪಡಿ ಮಾಡಿ ಆದೇಶಿಸಲಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದ ನಂತರ ರಾಜ್ಯ ಸರ್ಕಾರ ದಿನಾಂಕ 28.05.2020 ರಂದು ತಳವಾರ ಹಾಗೂ ಪರಿವಾರ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವ ಕುರಿತು ಗೆಜೆಟ್ ಹೊರಡಿಸಿದ್ದರೂ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳು ಸದರಿ ಪರಿವಾರ ಹಾಗೂ ತಳವಾರ ಸಮುದಾಯಗಳು ಗಂಗಾಮತ, ಕೋಲಿ, ಕಬ್ಬಲಿಗ ಜಾತಿಗೆ ಸೇರಿದವು ಎಂದು ಕಾರಣ ಹೇಳಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳ ನಿರಾಕರಣೆಯಿಂದಾಗಿ ತಳವಾರ ಹಾಗೂ ಪರಿವಾರ ಸಮೂದಾಯದವರಿಗೆ ಉದ್ಯೋಗ, ನೇಮಕಾತಿ ಹಾಗೂ ಇತರೆ ಸೌಲಭ್ಯ ದೊರಕದಂತಾಗಿ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರದ ಆದೇಶ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯ ಅನ್ವಯ ತಳವಾರ ಹಾಗೂ ಪರಿವಾರ ಸಮೂದಾಯವರಿಗೆ ಎಸ್ಟಿ ಪ್ರಮಾಣ ಪತ್ರ ದೊರಕಲು ಆದೇಶ ನೀಡಬೇಕೆಂದು ಸಿಎಂ ಬಿಎಸ್ವೈಗೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.