ಕಲಬುರಗಿ: ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬದ ಸಂಭ್ರಮಕ್ಕೆ ಕಲಬುರಗಿ ಸಾಕ್ಷಿಯಾಗಿದೆ. ನಗರದಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮಾರುಕಟ್ಟೆಗೆ ಕುಟುಂಬ ಸಮೇತವಾಗಿ ಆಗಮಿಸಿದ ಮುಸ್ಲಿಂ ಬಾಂಧವರು ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
ನಗರದ ಸೂಪರ್ ಮಾರ್ಕೆಟ್, ಕಪಡಾ ಮಾರುಕಟ್ಟೆ ಪ್ರದೇಶ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಸ್ಲಿಮರು ಹಬ್ಬದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ರಾತ್ರಿ ರಂಜಾನ್ ರಾತ್ (ಇಡೀ ರಾತ್ರಿ ಮಾರುಕಟ್ಟೆ ಓಪನ್) ನಡೆಯಲಿದ್ದು, ಮಾರುಕಟ್ಟೆ ಜನಜಂಗುಳಿಯಿಂದ ತುಂಬಿದೆ. ಹೊಸ ಉಡುಪು, ಹೊಸ ಬಟ್ಟೆ, ಶೂ ಹಾಗೂ ಇನ್ನಿತರ ಬಟ್ಟೆಗಳನ್ನು ಹಾಕಿಕೊಂಡು ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಬೇಕು ಎಂಬ ಪದ್ಧತಿ ಇದೆ.
ವ್ಯಾಪಾರ-ವಹಿವಾಟು ಜೋರು.. ಮುಸ್ಲಿಂ ಧರ್ಮಿಯರು ಬಟ್ಟೆ, ಶೂ, ಪರ್ಫ್ಯೂಮ್, ಮನೆ ಅಲಂಕಾರಿ ವಸ್ತುಗಳು ಸೇರಿದಂತೆ ಗೃಹ ಅಡುಗೆ ಸಾಮಗ್ರಿಗಳನ್ನು ಖರೀದಿಸುತ್ತಾರೆ. ರಂಜಾನ್ ಸ್ಪೆಷಲ್ ಅಂತ ಪ್ರತಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಇಡಲಾಗಿದೆ. ಇದರಿಂದಾಗಿ ಮಾರುಕಟ್ಟೆಯ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಬಿರು ಬಿಸಿಲಿನ ನಡುವೆಯೂ ಮುಂಜಾನೆಯಿಂದಲೇ ಸಾರ್ವಜನಿಕರು ಹಬ್ಬದ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.
ಕೊರೊನಾ ಕರಿನೆರಳಿನ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದ ರಂಜಾನ್ ಹಬ್ಬದ ಸಂಭ್ರಮ ಈ ಬಾರಿ ನಗರದಲ್ಲಿ ಅದ್ಧೂರಿಯಾಗಿ ಕಂಡು ಬರುತ್ತಿದ್ದು, ನಾಳೆ ಹಬ್ಬದ ಸಂಭ್ರಮ ಇಮ್ಮಡಿಗೊಳ್ಳಲಿದೆ.