ಕಲಬುರಗಿ : ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದ್ದು ಬ್ರಿಟನ್‌ನವರು. ದೇಶ ಬಿಟ್ಟು ಹೋಗುವಾಗ ತಮ್ಮ ಕುತಂತ್ರ ಬುದ್ಧಿಯನ್ನು ಕಾಂಗ್ರೆಸ್ ಪಕ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಹೀಗಾಗಿ, ದೇಶದಲ್ಲಿ ಜಿ23 ಕುತಂತ್ರ ಮಾಡಿದ್ರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಕುತಂತ್ರ ಮಾಡುತ್ತಿದ್ದಾರಷ್ಟೇ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಭೂಕಂಪನದಿಂದ ತಲ್ಲಣಗೊಂಡ ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ದೇಶದಲ್ಲಿ ಜಿ 23 ಹೆಸರಿನಲ್ಲಿ 23 ಜನ ಬುದ್ಧಿವಂತರು ಕುತಂತ್ರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಕುತಂತ್ರ ನಡೆಸುತ್ತಾರೆ. ಡಾ. ಜಿ ಪರಮೇಶ್ವರ್ ಅಂತಹ ಒಳ್ಳೆ ವ್ಯಕ್ತಿಯನ್ನು ಸಹ ಬಿಡದೇ ಸೋಲಿಸಿದ ಕುತಂತ್ರಿ ಪಕ್ಷ ಅದು ಎಂದು ಆರೋಪಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿದ್ದಾರೆ. ಪದೇಪದೆ 120 ವರ್ಷದ ಪಾರ್ಟಿ ಅಂತಾ ಹೇಳುವ ಕಾಂಗ್ರೆಸ್‌ನವರಿಗೆ ಲೋಕಸಭೆಯಲ್ಲಿ 20 ಸೀಟು ಗೆಲ್ಲಲು ಆಗಲಿಲ್ಲ. ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಕೂಡ ಉಳಿಸಿಕೊಳ್ಳಲು ಆಗಲಿಲ್ಲ. ಹೀನಾಯ ಸ್ಥಿತಿಯಲ್ಲಿದ್ದರೂ ಬುದ್ಧಿ ಬಂದಿಲ್ಲ.
ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಾಲು ಪ್ರಸಾದ್ ಪಾರ್ಟಿನೋ ಅಥವಾ ಯಾವುದಾದರೂ ಪ್ರಾದೇಶಿಕ ಪಾರ್ಟಿ ಜೊತೆನೋ ಕಾಂಗ್ರೆಸ್ ಪಕ್ಷವನ್ನು ವಿಲೀನ ಮಾಡಿಕೊಂಡ್ರೆ ಒಳ್ಳೆಯದು. ಕಡೆ ಪಕ್ಷ ಪ್ರಾದೇಶಿಕ ಪಕ್ಷವಾಗಿಯಾದ್ರೂ ಬದುಕಬಹುದು ಎಂದು ಲೇವಡಿ ಮಾಡಿದರು.
ಸಿಂದಗಿ ಹಾಗೂ ಹಾನಗಲ್ ಬೈ ಎಲೆಕ್ಷನ್ನಲ್ಲಿ ಗೆಲ್ಲುವುದು ಅವರ ಕನಸು ಮಾತ್ರ. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ, ಬೆಳಗಾವಿ ಉಪ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಸೋಲುಂಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡೆದ ಮನೆ. ಅವರ ಮನೆ ಅವರಿಗೆ ತೊಳೆದುಕೊಳ್ಳಲು ಆಗುತ್ತಿಲ್ಲ. ಬೇರೆಯವರ ಬಗ್ಗೆ ಏನು ಚಿಂತೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಓದಿ: ಕೇಸರಿ ಶಾಲು ಯಾರೇ ಹಾಕಿದರೂ ಸಮರ್ಥನೆ ಮಾಡಿಕೊಳ್ಳುತ್ತೇನೆ : ಸಚಿವ ಸುನಿಲ್‌ಕುಮಾರ್