ಕಲಬುರಗಿ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ತೆರ್ಗಡೆಯಾದ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ, ಒಂದು ದಿನದ ಮಟ್ಟಿಗೆ ಠಾಣಾಧಿಕಾರಿ ಹುದ್ದೆ ನೀಡುವ ಮೂಲಕ ಗಮನ ಸೆಳೆಯಲಾಯಿತು.
ಆಯಾ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಂಕ ಪಡೆದು ತೆರ್ಗಡೆಯಾದ ಯುವತಿಯರನ್ನು ಬೆಳಗ್ಗೆ ಪೊಲೀಸ್ ಠಾಣೆಗೆ ಕರೆಸಿ ಸನ್ಮಾನ ಮಾಡಿದ ಸಿಬ್ಬಂದಿ, ನಿನ್ನೆ ಇಡೀ ದಿನಕ್ಕೆ ಎಸ್‌ಎಚ್ಒ ( ಸ್ಟೇಷನ್ ಹೌಸ್ ಆಫೀಸರ್) ಹುದ್ದೆಯನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದರು. ಪೊಲೀಸ್ ಸಿಬ್ಬಂದಿ ಯುವತಿಯರಿಗೆ ಅಗತ್ಯ ಸಹಾಯ ಮಾಡುವ ಮೂಲಕ ಒಂದು ದಿನದ ಠಾಣಾಧಿಕಾರಿ ಹುದ್ದೆ ನಿರ್ವಹಿಸಲು ಪ್ರೋತ್ಸಾಹಿಸಿದರು. ಖುಷಿಯಿಂದ ಹುದ್ದೆ ಅಲಂಕರಿಸಿದ ವಿದ್ಯಾರ್ಥಿನಿಯರು ತಮಗೆ ಒದಗಿ ಬಂದ ಅವಕಾಶವನ್ನು ಸದುಪಯೋಗ ಪಡೆದುಕೊಂಡರು.
ಅಫಜಲಪುರ ಠಾಣೆಯಲ್ಲಿ ವಿದ್ಯಾರ್ಥಿನಿ ದೀಪಾ ಮುಗಳಿ, ದೇವಲ ಗಾಣಗಾಪೂರ ಠಾಣೆಯಲ್ಲಿ ನಿಸರ್ಗ ಸೂತಾರ, ಮುದೋಳ ಠಾಣೆಯಲ್ಲಿ ನಾಜಿಯಾ ಬೇಗಂ, ಚಿತ್ತಾಪುರ ಠಾಣೆಗೆ ತೇಜಶ್ವಿನಿ ಕಾಶಿ, ವಾಡಿ ಠಾಣೆಗೆ ನಿಖಿತಾ ಜಾರ್ಜ್, ಕಾಳಗಿ ಠಾಣೆಗೆ ಮಹಾದೇವಿ, ಮಾಡಬೂಳ ಠಾಣೆಗೆ ಅರ್ಪಿತಾ ಜೋಶಿ, ರೇವೂರ ಠಾಣೆಗೆ ಮೇಘಾ ಮೇತ್ರಿ ಹೀಗೆ ಆಯಾ ಠಾಣಾ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಜವಾಬ್ದಾರಿ ನೀಡಲಾಗಿತ್ತು. ಇಡೀ ದಿನ ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ವಿದ್ಯಾರ್ಥಿನಿಯರು ಸಂತಸ ವ್ಯಕ್ತ ಪಡಿಸಿದರು. ಅಷ್ಟೇ ಅಲ್ಲದೆ, ಜಿಲ್ಲೆಯ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಎಕ್ಸಿಟ್ ಪೋಲ್: ಉತ್ತರ ಪ್ರದೇಶದಲ್ಲಿ ಭವಿಷ್ಯ ನಿಜವಾಗುವುದೇ?, ಏನಿದರ ಲೆಕ್ಕಾಚಾರ?