ಕಲಬುರಗಿ: ನಾವು, ನೀವು ಪುಟ್ಟ ಕಂದಮ್ಮಗಳಿಗೆ ತೊಟ್ಟಿಲು ಶಾಸ್ತ್ರ ಮಾಡಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಗರದಲ್ಲಿ ಕರುವಿಗೆ ತೊಟ್ಟಿಲು ಶಾಸ್ತ್ರ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇಲ್ಲಿನ ರಾಜಾಪುರ ಬಡಾವಣೆಯ ನಿವಾಸಿ ಯಶೋಧಾ ಕಟಕೆ ತಮ್ಮ ಮುದ್ದಿನ ಕರುವಿಗೆ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಮಾಡಿದ್ದಾರೆ. ಇವರು ವಿಶ್ವವಿದ್ಯಾಲಯ ಠಾಣೆ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ವೃತ್ತಿಯ ಜೊತೆಗೆ ಪ್ರಾಣ - ಪಕ್ಷಿಗಳನ್ನು ಪೋಷಣೆ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಪಿಎಸ್‌ಐ ಯಶೋಧಾ ಅವರು, ತಾವು ಸಾಕಿದ ಕರುವಿಗೆ ತೊಟ್ಪಿಲು ಶಾಸ್ತ್ರ ಮಾಡಿ ರಾಧಾ ಎಂದು ಹೆಸರಿಟ್ಟು ಪ್ರಾಣಿಗಳ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕರುವಿನ ತೊಟ್ಟಿಲು ಶಾಸ್ತ್ರದ ಕಾರ್ಯಕ್ರಮಕ್ಕೆ ಮಂಗಳಮುಖಿಯರನ್ನು ಕರೆಸಿ ಅವರಿಂದಲೇ ಕರುವಿಗೆ ಹೆಸರಿಡಿಸಿದ್ದಾರೆ. ಬಳಿಕ ಅವರಿಗೆ ಅರಿಶಿಣ ಕುಂಕುಮ ಕೊಟ್ಟು ಗೌರವಿಸಿದ್ದಾರೆ.
ಯಶೋಧಾ ಅವರು ಪೊಲೀಸ್ ಇಲಾಖೆಗೆ ಸೇರಿಕೊಂಡ ಮೇಲೆ ಜನಸ್ನೇಹಿ ಕಾರ್ಯಗಳನ್ನು ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ಸ್ವಂತ ಖರ್ಚಿನಲ್ಲಿ ಬಡವರಿಗೆ ಸಹಾಯ ಮಾಡಿದ್ದಾರೆ. ಈ ಮೂಲಕ ಅನೇಕ ಸಮಾಜಮುಖಿ ಕೆಲಸಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಲ್ಲಿಯವರೆಗೂ ನೂರಾರು ಹಸುಗಳನ್ನು ಕಟುಕರ ಪಾಲಾಗುವುದರಿಂದ ರಕ್ಷಿಸಿದ್ದು, ಅವುಗಳನ್ನು ಗೋ ಶಾಲೆಗೆ ಕಳುಹಿಸಿ ನಿಗಾ ಇಟ್ಟಿದ್ದಾರೆ. ಅದೇ ಗೋವುಗಳು ಜನ್ಮ ನೀಡಿದ ಈ ಕರುವಿಗೆ ತೊಟ್ಟಿಲು ಶಾಸ್ತ್ರ ಮಾಡಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: Karnataka Covid: ರಾಜ್ಯದಲ್ಲಿಂದು 303 ಹೊಸ ಕೇಸ್ ಪತ್ತೆ, ಕೊರೊನಾ ಸಾವಿನಿಂದ ಜಿಲ್ಲೆಗಳು ಮುಕ್ತ