ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಹಾಗೂ ಈತನ ಸಹಚರ ಮಲ್ಲಿಕಾರ್ಜುನ ಪಾಟೀಲ್‌ನನ್ನು 13 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ನಿನ್ನೆ ಮಹಾರಾಷ್ಟ್ರದ ಸೋಲ್ಲಾಪುರ ಬಳಿ ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ಸಿಐಡಿ ತಂಡ ರಾತ್ರಿ ಕಲಬುರಗಿಗೆ ಕರೆ ತಂದಿತ್ತು.
ಭಾನುವಾರ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಸಿಐಡಿ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಪ್ರಕಾಶ್. ಸಿ.ಡಿ ಇಬ್ಬರನ್ನು ಸಿಐಡಿ ವಶಕ್ಕೆ ನೀಡಿದ್ದಾರೆ.
ಆರ್.ಡಿ.ಪಾಟೀಲ್ ಕಾರ್ ಜಪ್ತಿ: ಆರ್.ಡಿ.ಪಾಟೀಲ್ ಬಳಸಿದ್ದ ಸ್ವಿಫ್ಟ್ ಕಾರ್ ಅನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರು ದಿನಗಳ ಕಾಲ ಇದೆ ವಾಹನದಲ್ಲಿ ಓಡಾಡಿದ ಆರ್.ಡಿ.ಪಾಟೀಲ್, ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ ಸೇರಿದಂತೆ ಮತ್ತಿತರ ಕಡೆ ಓಡಾಡಿದ್ದನು. ಈತನಿಗೆ ಸಹಚರ ಮಲ್ಲಿಕಾರ್ಜುನ ಪಾಟೀಲ್ ಸಾಥ್ ನೀಡಿದ್ದ. ಸ್ವಿಫ್ಟ್ ಕಾರು ಮಲ್ಲಿಕಾರ್ಜುನ ಬಿದನೂರ ಎಂಬುವರಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ. ಕಾರಿನಲ್ಲೆ ಬಟ್ಟೆ ಬದಲಾಯಿಸಿ ಓಡಾಡುತ್ತಿದ್ದ ಆರ್.ಡಿ.ಪಾಟೀಲ್ ಹಾಗೂ ಮಲ್ಲು ಪಾಟೀಲ್.
ಇದನ್ನೂ ಓದಿ: PWD ಪರೀಕ್ಷೆಯಲ್ಲಿ ಅಕ್ರಮ? ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ವಿಡಿಯೋ ವೈರಲ್
'ನನ್ನ ಮಗ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ': ಸಿಐಡಿ ಕಸ್ಟಡಿಯಲ್ಲಿರುವ ಮಲ್ಲಿಕಾರ್ಜುನ ಪಾಟೀಲ್‌ನನ್ನು ನೋಡೋದಕ್ಕೆ ಬಂದಿರುವ ತಂದೆ ಸಿದ್ದಣ್ಣಾ ಪಾಟೀಲ್ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಎರಡು ದಿನದಿಂದ ನನ್ನ ಮಗ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಸಿಐಡಿ ಅಧಿಕಾರಿಗಳು ಫೋನ್ ಮಾಡಿದ್ರು, ಸಿಐಡಿ ಕಚೇರಿಗೆ ಬರುವಂತೆ ಹೇಳಿದ್ರೂ ಅದಕ್ಕೆ ಇವಾಗ ಬಂದಿದ್ದೇನೆ. ನನ್ನ ಮಗ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಆರ್.ಡಿ.ಪಾಟೀಲ್ ಸ್ನೇಹಿತ ಎಂಬ ಕಾರಣಕ್ಕೆ ಆತನ ಜೊತೆಗೆ ಸುತ್ತಾಡುತ್ತಿದ್ದ ಅಷ್ಟೇ. ನನ್ನ ಮಗ ಗುತ್ತಿಗೆದಾರ ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ಹೇಳಿದ್ದಾರೆ.