ಕಲಬುರಗಿ/ದಾವಣಗೆರೆ: ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಕಲಬುರಗಿ ನಗರದಲ್ಲಿ ಕೋಲಿ, ಕಬ್ಬಲಿಗ ಮತ್ತು ತಳವಾರ ಸಮುದಾಯದವರು ಬೃಹತ್ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ನೇತೃತ್ವದಲ್ಲಿ ಬೃಹತ್ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ತೀಬ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಕೋಲಿ, ಕಬ್ಬಲಿಗ ಮತ್ತು ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡುವುದಾಗಿ ಕಳೆದ ಹಲವು ವರ್ಷಗಳಿಂದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಮಾತು ಕೊಟ್ಟು ಮರೆತರು. ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಿಂಧಗಿ ಉಪ ಚುನಾವಣೆಯಲ್ಲಿ ಮೂರ್ನಾಲ್ಕು ತಿಂಗಳಲ್ಲಿ ಎಸ್ ಟಿ ಪ್ರಮಾಣ ಪತ್ರ ನೀಡುವುದಾಗಿ ಸುಳ್ಳು ಭರವಸೆ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಅವರಷ್ಟೆ ಅಲ್ಲ ಸಂಸದ ಉಮೇಶ್ ಜಾಧವ್ ಸಮುದಾಯದ ಮತ ಪಡೆದು ಗೆಲುವು ಸಾಧಿಸಿ ವಂಚಿಸಿದ್ದಾರೆ ಎಂದು ಕಿಡಿಕಾರಿದರು. ಕೂಡಲೆ ಕೋಲಿ, ಕಬ್ಬಲಿಗ ಹಾಗೂ ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಚಿಂಚನಸೂರು ವಿರುದ್ಧ ಕಿಡಿ : ಇದೆ ವೇಳೆ ಕೊಲಿ ಸಮುದಾಯದ ಮುಖಂಡ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ವಿರುದ್ಧವು ಕಿಡಿಕಾರಿದ ಹೋರಾಟಗಾರರು, ಚಿಂಚನಸೂರು ಅವರು ಸಮುದಾಯದಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಸಮುದಾಯ ಮತ ಸೆಳೆಯಲು ಎಸ್ ಟಿ ಪ್ರಮಾಣ ಪತ್ರ ಕೊಡಿಸುತ್ತೇವೆ, ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದಿದ್ದರು. ಮೂರು ವರ್ಷ ಆಯಿತು ಪ್ರಮಾಣ ಪತ್ರದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಹಸಿ ಮೀನು ಬಾಯಿಗಿಟ್ಟುಕೊಂಡು ಪ್ರತಿಭಟನೆ : ವೀರಶೈವ ಜಂಗಮರಿಗೆ ಎಸ್ ಸಿ ಜಾತಿ ಪ್ರಮಾಣ ಪಡೆಯುತ್ತಿರುವುದಕ್ಕೆ ದಲಿತ ಸಂಘಟನೆಗಳ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದುಳಿದ ಬೇಡ ಜಂಗಮ ಹಾಗೂ ದಲಿತ ಸಮುದಾಯಗಳು ಬೀದಿಗಿಳಿದು ಪ್ರತಿಭಟನೆ ಕೈಗೊಂಡಿವೆ.
ದಾವಣಗೆರೆ ಜಿಲ್ಲೆಯ ಹರಿಹರದ ತುಂಗಾಭದ್ರ ನದಿಯಲ್ಲಿ ಮೀನು ಬಾಯಲ್ಲಿಟ್ಟುಕೊಂಡು ಹಿಂದುಳಿದ ಬೇಡ ಜಂಗಮ ಸಮುದಾಯದವರು ವಿನೂತನವಾಗಿ ಪ್ರತಿಭಟನೆ ಮಾಡಿದರು. ತಮ್ಮ ಆಚರಣೆ, ಸಂಸ್ಕೃತಿ ಬಿಂಬಿಸಿ ಪ್ರತಿಭಟನೆ ಮಾಡಿದ ಬೇಡ ಜಂಗಮ ಸಮುದಾಯವರು, ಮುಂದುವರಿದ ಜನಾಂಗದವರು ಅಸ್ಪೃಶ್ಯರ ಅನ್ನವನ್ನು ಕಸಿಯುತ್ತಿದ್ದಾರೆ ಎಂದು ಚಾಟಿ ಯಿಂದ ಹೊಡೆದುಕೊಂಡು ವಿಭಿನ್ನ ಪ್ರತಿಭಟನೆ ಮಾಡಿದರು.
ಉಳ್ಳವರು ದಲಿತರ ಹಕ್ಕು ಕಸಿಯುತಿದ್ದಾರೆ, ವೀರಶೈವ ಜಂಗಮರು ಬೇಡ ಜಂಗಮ ಅಂತ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತಿದ್ದಾರೆ. ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ನಕಲಿ ಜಾತಿ ಪ್ರಮಾಣಪತ್ರ ಕೊಡುವುದನ್ನು ನಿಲ್ಲಿಸಿ ಎಂದು ಹಿಂದುಳಿದ ಬೇಡ ಜಂಗಮ ಸಮುದಾಯ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ : ಬೆಂಗಳೂರಲ್ಲಿ ಸೆ.24ಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಿಗದಿ