ಸೇಡಂ (ಕಲಬುರಗಿ): ಪ್ರಧಾನಿ ನರೇಂದ್ರ ಮೋದಿ ಹೊಲಕ್ಕೆ ಹೋಗಿ ಗಳೇವ್ ಹೊಡೆದಿಲ್ಲ, ಬೆಳೆ ಅಂದ್ರ ಗೊತ್ತಿಲ್ಲ. ಅದಕ್ಕಾಗಿಯೇ ರೈತರ ಕಾಳಜಿ ಅವರಿಗಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೃಷಿ ಕಾನೂನು ವಿರೋಧಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲಿಸಿ ಸಹಾಯಕ ಆಯುಕ್ತರ ಕಚೇರಿ ಎದುರು ರ‍್ಯಾಲಿ ಮತ್ತು ಪ್ರತಿಭಟನಾ ಸಮಾವೇಶ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಕೃಷಿ ಕಾನೂನುಗಳು ರೈತರ ಪರವಾಗಿವೆ ಎಂದು ದೇಶದಲ್ಲಿ ಕೇವಲ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಬ್ಬರೇ ಹೇಳುತ್ತಾರೆ. ಯಾವುದೇ ರಾಜಕೀಯವಿಲ್ಲದ 500 ರೈತ ಸಂಘಟನೆಗಳು ನಿತ್ಯ ಹೋರಾಟ ನಡೆಸುತ್ತಿದ್ದರೂ ಸಹ, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗುತ್ತಿಲ್ಲ. ಅದಾನಿ-ಅಂಬಾನಿಗೆ ನೆರವಾಗುವ ಕಾನೂನುಗಳನ್ನು ದೇಶದಲ್ಲಿ ರೂಪಿಸಲಾಗುತ್ತಿದೆ ಎಂದರು.
ಬಂಡವಾಳ ಶಾಹಿಗಳ ಗುಲಾಮರಂತೆ ಕೇಂದ್ರದ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಎಪಿಎಂಸಿ ಕಾಯ್ದೆ ರದ್ದು ಮಾಡಿ, ಬಂಡವಾಳ ಶಾಹಿಗಳ ಕೈಯಲ್ಲಿ ರೈತರ ಬದುಕು ನೀಡುವ ಹುನ್ನಾರ ನಾಲ್ಕು ವರ್ಷಗಳ ಹಿಂದೆಯೇ ಮಾಡಲಾಗಿತ್ತು ಎಂಬುದಕ್ಕೆ ನಾಲ್ಕು ವರ್ಷಗಳ ಹಿಂದೆ ಅದಾನಿ ಗೋಡೌನ್ಗಳನ್ನು ನಿರ್ಮಿಸಿರುವುದನ್ನು ಗಮನಿಸಿದ್ರೆ ತಿಳಿಯುತ್ತದೆ ಎಂದರು.
ಇದಕ್ಕೂ ಮುಂಚೆ ಕಾಂಗ್ರೆಸ್ ಕಚೇರಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ, ಸಹಾಯಕ ಆಯುಕ್ತರಾದ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.