ಕಲಬುರಗಿ : ಅನುದಾನ ರಹಿತ ಖಾಸಗಿ ಶಾಲೆ ಮಾಲೀಕರು, ಶಿಕ್ಷಕರು, ಸಿಬ್ಬಂದಿ ಅನುದಾನದ ಜೊತೆಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದಶಕಗಳಿಂದ ನಿರಂತರ ಹೋರಾಟ ಮಾಡ್ತಿದ್ದಾರೆ.
ಬೀದಿಗಿಳಿದು ಭಿಕ್ಷಾಟನೆ ಮಾಡಿ ಪ್ರತಿಭಟನೆ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ಸರ್ಕಾರದ ನಿರ್ಲಕ್ಷ ಧೋರಣೆಗೆ ಬೇಸತ್ತು ನಾಳೆ ಒಂದು ದಿನ ಶಾಲೆಗಳನ್ನ ಬಂದ್ ಮಾಡಿ ಸಾಂಕೇತಿಕ ಧರಣಿ ನಡೆಸಲು ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕರು, ಶಿಕ್ಷಕರು, ಸಿಬ್ಬಂದಿ ದಶಕಗಳಿಂದ ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.
ಅದರಲ್ಲೂ 371ಜೆ ಅಡಿ ಕೆಕೆಆರ್ ಡಿಬಿಯಿಂದ ಅನುದಾನ, 1995ರಿಂದ 2015ರವರೆಗಿನ ಎಲ್ಲಾ ಕನ್ನಡ ಶಾಲೆಗಳನ್ನ ವೇತನಾನುದಾನಕ್ಕಾಗಿ ಒಳಪಡಿಸಬೇಕು ಎಂಬ ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸುತ್ತಿದ್ರೂ ಸರ್ಕಾರ ಯಾವುದೇ ರೀತಿಯಿಂದ ಸ್ಪಂದಿಸಿಲ್ಲ.
ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ, ಶಿಕ್ಷಕರಿಗೆ ಸಂಬಳ ಕೊಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆ ನಡೆಸೋದೆ ಕಷ್ಟವಾಗಿದೆ ಅಂತಾ ಹೋರಾಟದ ಮೂಲಕ ಸರ್ಕಾರದ ಮನವಿ ಮಾಡಿಕೊಂಡ್ರೂ ಸಹ ಸರ್ಕಾರಗಳು ಕೇರ್ ಮಾಡಿಲ್ಲ.
ಹೀಗಾಗಿ, ಸರ್ಕಾರಗಳ ನಿರ್ಲಕ್ಷ ಧೋರಣೆಗೆ ಬೇಸತ್ತು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು, ನಾಳೆ ತಮ್ಮ ತಮ್ಮ ಶಾಲೆಗಳನ್ನ ಬಂದ್ ಮಾಡಿ, ಕಪ್ಪುಪಟ್ಟಿ ಧರಿಸಿ, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಶಾಲೆಗಳ ಮುಂಭಾಗ ಒಂದು ದಿನ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಅನುದಾನ ರಹಿತ ಖಾಸಗಿ ಶಾಲೆಗಳಿವೆ. ಸಾವಿರಾರು ಶಿಕ್ಷಕರು, ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 371ಜೆ ಅಡಿಯಲ್ಲಿ ಅನುದಾನ ರಹಿತ ಖಾಸಗಿ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು ಅಂತಾ ಕಳೆದ 7 ವರ್ಷಗಳಿಂದ ಕೆಕೆಆರ್ ಡಿಬಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ.
ಇದರಿಂದ ಇದೇ ತಿಂಗಳು 9ರಂದು ಕಲಬುರಗಿ ನಗರದ ಎಸ್‌ವಿಪಿ ವೃತ್ತದಿಂದ ಕೆಕೆಆರ್ ಡಿಬಿ ಕಚೇರಿವರೆಗೂ ಆರು ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಗಳು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ರು. ಅಲ್ಲದೆ ಕೆಕೆಆರ್ ಡಿಬಿ ಮುಂದೆ ಶಿಕ್ಷಕರು ತಟ್ಟೆ ಹಿಡಿದು ಅನುದಾನದ ಭಿಕ್ಷೆ ಬೇಡಿ ವಿಭಿನ್ನವಾಗಿ ಪ್ರತಿಭಟಿಸಿದ್ರು. ಇಷ್ಟಾದರೂ ನಮ್ಮ ಬೇಡಿಕೆಗಳಿಗೆ ಸರ್ಕಾರ, ಕೆಕೆಆರ್ ಡಿಬಿ ಸ್ಪಂದಿಸುತ್ತಿಲ್ಲ ಅಂತಾ ಕಲ್ಯಾಣ ಕರ್ನಾಟಕದ ಅನುದಾನ ರಹಿತ ಖಾಸಗಿ ಶಾಲೆ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಆಕ್ರೋಶ ಹೊರ ಹಾಕಿದೆ.
ಓದಿ: ಮೃಗಾಲಯದ ಪ್ರಾಣಿಗಳಿಗೆ ದನದ ಮಾಂಸ ನೀಡುವ ಬಗ್ಗೆ ಪರಿಶೀಲನೆ; ಸಚಿವ ಸೋಮಶೇಖರ್
ಇಂಗ್ಲಿಷ್ ಮಾಧ್ಯಮಗಳ ಹಾವಳಿ ನಡುವೆ ಕನ್ನಡ ಮಾಧ್ಯಮ ಶಾಲೆಗಳು ಅನುದಾನ ಇಲ್ಲದೆ ನಡೆಸೋದೆ ಕಷ್ಟವಾಗಿದೆ. ಆದ್ರೂ ಕನ್ನಡ ಶಾಲೆಗಳನ್ನ ಉಳಿಸಿ ಬೆಳೆಸಬೇಕು, ಸೇವಾ ಮನೋಭಾವದಿಂದ ಶಾಲೆಗಳನ್ನ ನಡೆಸುತ್ತಿದ್ದೇವೆ ಅಂತಾ ಶಿಕ್ಷಣ ಸಂಸ್ಥೆ ಮಾಲೀಕರು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.