ಕಲಬುರಗಿ: ಅಂಗನವಾಡಿ ಕಾರ್ಯಕರ್ತೆಯರ ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೇಡಂ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ಕಾರ್ಯಕರ್ತೆಯರ ಸಂಘ ಹಾಗೂ ಎ.ಐ.ಯು.ಟಿ.ಯು.ಸಿ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಎಸ್ವಿಪಿ ವೃತ್ತದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು, ಬಾಕಿ ವೇತನ ಪಾವತಿಸುವಂತೆ ಹಾಗೂ ಬಾಕಿ ಉಳಿದ ತತ್ತಿ ಬಿಲ್, ಸಿಲಿಂಡರ್ ಬಿಲ್ ಪಾವತಿಸಬೇಕು ಹಾಗೂ ಮಾತೃಪೂರ್ಣ ಯೋಜನೆಗಳಿಗೆ 500 ರೂ. ಭತ್ಯ ನೀಡುವಂತೆ ಆಗ್ರಹಿಸಿದರು. ಕಳೆದ ಐದು ತಿಂಗಳಿಂದ ವೇತನ ನೀಡದೆ ಪುಗಸಟ್ಟೆ ದುಡುಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ವೇತನ ಸೇರಿದಂತೆ ಅಂಗನವಾಡಿಗೆ ಸಂಭಂದಿಸಿದ ವಿವಿಧ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.