ಸೇಡಂ (ಕಲಬುರಗಿ): ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಅಬಕಾರಿ ಸುಂಕದ ಹೆಸರಲ್ಲಿ ಬಾರ್ ಮತ್ತು ವೈನ್ ಶಾಪ್‌ಗಳು ಗ್ರಾಹಕರಿಂದ ಭಾರಿ ಲೂಟಿ ನಡೆಸಿರುವ ಅಂಶ ಬೆಳಕಿಗೆ ಬರುತ್ತಿದೆ. ಲಾಕ್‌ಡೌನ್ ವೇಳೆ ಮದ್ಯದ ಮೇಲಿನ ತೆರಿಗೆಯನ್ನು ಸರ್ಕಾರ ಶೇ.17 ರಷ್ಟು ಏರಿಸಿತ್ತು.ಇದು ಮದ್ಯಪ್ರಿಯರಿಗೆ ಒಂದೆಡೆ ಆಘಾತ ನೀಡಿದ್ದರೆ, ಇನ್ನೊಂದೆಡೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಮದ್ಯದಂಗಡಿಗಳು ಹಗಲು ದರೋಡೆಗೆ ಇಳಿದಿವೆ.
ಪಟ್ಟಣ ಸೇರಿದಂತೆ ತಾಲೂಕಿನ ಮುಧೋಳ, ಮಳಖೇಡ, ಕೋಡ್ಲಾ, ಕೋಲಕುಂದಾ ವ್ಯಾಪ್ತಿಯ ಬಹುತೇಕ ಮದ್ಯದ ಅಂಗಡಿಗಳು ಹೆಚ್ಚು ಹಣವನ್ನು ಗ್ರಾಹಕರಿಂದ ಪಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಬಾರ್ ಮತ್ತು ವೈನ್ಶಾಪ್ಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಸರ್ಕಾರ ನಡೆಸುವ ಎಂ.ಎಸ್.ಐ.ಎಲ್ ಮಳಿಗೆಗಳಿಗೆ ತೆರಳಿದರೆ ಗ್ರಾಹಕರಿಗೆ ಅಲ್ಲೂ ವಸೂಲಿ ಕಾಟ ತಪ್ಪಿಲ್ಲ. ಎಂ.ಎಸ್.ಐ.ಎಲ್. ಮದ್ಯದ ಮಳಿಗೆಗಳಲ್ಲೂ 100-200 ರೂ. ಹೆಚ್ಚುವರಿ ಹಣ ಪಡೆದು ಕುಡುಕರ ಜೇಬಿಗೆ ಕನ್ನ ಹಾಕಲಾಗುತ್ತಿದೆ. ಅಬಕಾರಿ ಇಲಾಖೆಯ ನಿರ್ದೇಶನಗಳ ಪ್ರಕಾರ, ಪ್ರತಿಯೊಂದು ಮದ್ಯದಂಗಡಿಯಲ್ಲಿ ತಾವು ಮಾರಾಟ ಮಾಡುವ ಮದ್ಯದ ಬಾಟಲಿಗಳ ಎಂ.ಆರ್.ಪಿ. ದರಪಟ್ಟಿಯನ್ನು ಬಹಿರಂಗವಾಗಿ ಪ್ರದರ್ಶಿಸಬೇಕು. ಆದರೆ ತಾಲೂಕಿನ ಯಾವುದೇ ಅಂಗಡಿಯಲ್ಲೂ ಈ ವ್ಯವಸ್ಥೆ ಇಲ್ಲ.
ಸಿ.ಎಲ್- 2 ವೈನ್ ಶಾಪ್‌ಗಳು ಕೇವಲ ಮದ್ಯವನ್ನು ಮಾರಾಟ ಮಾಡುವ ಹಕ್ಕು ಹೊಂದಿವೆ. ಆದರೆ ಕೆಲವೆಡೆ ವೈನ್ ಶಾಪ್‌ಗಳು ಬಾರ್ಗಳಾಗಿ ಮಾರ್ಪಟ್ಟಿವೆ. 180 ಎಂ.ಎಲ್. ಮದ್ಯ ಖರೀದಿಸಿದರೆ 30 ರಿಂದ 40 ರೂ. ಹೆಚ್ಚು ಹಣ ಪಡೆಯಲಾಗುತ್ತಿದೆ. ಇಷ್ಟು ಹಣ ಕೊಟ್ಟರೂ ಬಿಲ್ ನೀಡುವುದಿಲ್ಲ. ಗ್ರಾಹಕರ ಹಕ್ಕುಗಳಿಗೆ ಕಿಮ್ಮತ್ತಿಲ್ಲದಂತಾಗಿದೆ. ಹಾಗಾಗಿ ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅನ್ನೋದು ಕುಡುಕರ ಒತ್ತಾಯ.
ಎಂ.ಆರ್.ಪಿ. ದರದಲ್ಲೇ ಮದ್ಯ ಮಾರಾಟ ಮಾಡಬೇಕು. ಹೆಚ್ಚುವರಿಯಾಗಿ ಹಣ ಪಡೆವ ಅಂಗಡಿಗಳ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ತಿಳಿಸಿದ್ದಾರೆ.