ಕಲಬುರಗಿ: ನಾಳೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾವ್ ತಿಳಿಸಿದ್ದಾರೆ.
ಮಾರ್ಚ್ 04 ರಿಂದ 23ರ ವರೆಗೆ ನಡೆಯಲಿರುವ ಪಿಯುಸಿ ಪರೀಕ್ಷೆಗೆ ಜಿಲ್ಲಾದ್ಯಂತ ಒಟ್ಟು 47 ಪರೀಕ್ಷಾ ಕೇಂದ್ರಗಳು ನಿಗದಿಪಡಿಸಿದ್ದು, ನಗರದಲ್ಲಿ 25 ಹಾಗೂ ತಾಲೂಕು ಕೇಂದ್ರಗಳಲ್ಲಿ 22 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 29,415 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಪೈಕಿ 22,755 ಹೊಸ ಅಭ್ಯರ್ಥಿಗಳು, 5,348 ಪುನರಾವರ್ತಿತ ಅಭ್ಯರ್ಥಿಗಳು, ಹಾಗೂ 1312 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ.
ಇನ್ನು ಕಲಾ ವಿಭಾಗದಿಂದ 12706, ವಾಣಿಜ್ಯ ವಿಭಾಗದ 5,860, ವಿಜ್ಞಾನ ವಿಭಾಗದಿಂದ 10,849 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ. ಜಿಲ್ಲೆಯ ಅಫಜಲಪುರ ಸರ್ಕಾರಿ ಪದವಿಪೂರ್ವ ಕಾಲೇಜು, ಕರಜಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಮಾದನ ಹಿಪ್ಪರಗಾ ಪದವಿಪೂರ್ವ ಕಾಲೇಜು ಹಾಗೂ ಜೇವರ್ಗಿಯ ಎಸ್.ಜಿ.ಎಸ್.ವಿ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು 4 ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ ವಿಶೇಷ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ:
ನಕಲು ತಡೆಯಲು ಹಾಗೂ ಜಿಲ್ಲೆ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ 47 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಇಬ್ಬರು ಸಿಟ್ಟಿಂಗ್ ಸ್ಕ್ಯಾಡ್, ತಾಲೂಕಿಗೆ ಒಂದು ಮೊಬೈಲ್ ಸ್ಕ್ಯಾಡ್ ತಂಡ ನಿಯೋಜಿಸಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ಮೊಬೈಲ್ ನಿಷೇಧಿಸಲಾಗಿದೆ ಕೇಂದ್ರದಲ್ಲಿ ಯಾರೂ ಕೂಡ ಮೊಬೈಲ್ ಬಳಸದಂತೆ ಸೂಚಿಸಿದ್ದಾರೆ.