ಕಲಬುರಗಿ : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ನೇತೃತ್ವಲ್ಲಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಿಪಿಐ, ಸಿಪಿಐಎಂಗಳ ಜೊತೆಗೆ ಜೆಡಿಎಸ್ ಪಕ್ಷವೂ ಬಂದ್‌ಗೆ ಬೆಂಬಲಿಸಿದೆ. ಜೊತೆಗೆ ಹಲವು ಕಾರ್ಮಿಕ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕೆಲ ಕನ್ನಡಪರ ಸಂಘಟನೆಗಳೂ ಬಂದ್‌ಗೆ ಬೆಂಬಲಿಸಿವೆ. ಎಪಿಎಂಸಿ ವರ್ತಕರೂ ಬಂದ್‌ಗೆ ಬೆಂಬಲಿಸಿದ್ದಾರೆ. ಆದರೆ, ಆಟೋ ಚಾಲಕರು, ಸಾರಿಗೆ ನೌಕರರು ಬಂದ್‌ಗೆ ಬೆಂಬಲಿಸಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಸುಗ್ರೀವಾಜ್ಞೆ ಮೂಲಕ ಕರಾಳ ಕಾಯ್ದೆ ಜಾರಿಗೆ ತರಲು ಮುಂದಾಗಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಲ್ಲ. ಬಂದ್ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ತೋರಿಸುತ್ತೇವೆ. ಎಲ್ಲ ಸಂಘಟನೆಗಳೂ ತಮ್ಮ ಬಂದ್‌ಗೆ ಬೆಂಬಲ ಸೂಚಿಸಲಿವೆ ಎಂದು ಮಾನ್ಪಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಬಿಗಿ ಬಂದೋಬಸ್ತ್ : ನಾಳೆ ಕರ್ನಾಟಕ ಬಂದ್ ಹಿನ್ನೆಲೆ, ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆಎಸ್ಆರ್ಪಿ, ಡಿಎಆರ್ ಸೇರಿ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬಂದ್ ಚಲನವಲನ ಚಿತ್ರೀಕರಣ ಮಾಡಲು 30 ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.