ಸೇಡಂ: ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಪಟ್ಟಣದಲ್ಲಿ ಡಾಂಬಾರೀಕರಣಗೊಂಡ ರಿಂಗ್ ರಸ್ತೆ ಮೊದಲ ಮುಂಗಾರಿಗೆ ಕಿತ್ತು ಹೋಗಿದೆ. 33.37 ಲಕ್ಷ ವ್ಯಯಿಸಿ ನಿರ್ಮಿಸಿದ ರಸ್ತೆಯ ಬಹುತೇಕ ಕಡೆಗಳಲ್ಲಿ ಬಿರುಕು ಬಿಟ್ಟು, ತಗ್ಗು ದಿನ್ನೆಗಳು ನಿರ್ಮಾಣವಾಗಿದ್ದು, ಕಳಪೆ ಗುಣಮಟ್ಟದಿಂದ ಕಾಮಗಾರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಇಲ್ಲಿನ ವಿದ್ಯಾನಗರ, ವೆಂಕಟೇಶ ನಗರ ಬಡಾವಣೆಯ ಜನರಿಗೆ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡ ರಸ್ತೆ ನಿರ್ಮಾಣ ಕಾಮಗಾರಿ ಜನರಿಗೆ ಅನುಕೂಲವಾಗುವ ಬದಲು ಅನಾನುಕೂಲತೆ ಸೃಷ್ಟಿಸಿದೆ. ಇದರಿಂದ ಬಡಾವಣೆಯ ನಿವಾಸಿಗಳು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ರಸ್ತೆ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಹಲವಾರು ವರ್ಷಗಳಿಂದ ಸೂಕ್ತ ರಸ್ತೆಯೇ ಇಲ್ಲದೆ ನರಕಯಾತನೆ ಅನುಭವಿಸಿದ್ದ ಬಡಾವಣೆಯ ಜನರಿಗೆ ಕಳೆದ ವರ್ಷ ನಿರ್ಮಿಸಿದ ರಸ್ತೆಯಿಂದ ಸಂಚರಿಸಲು ಅನುಕೂಲವಾಗಿತ್ತು. ಆದರೆ, ಮೊದಲ ಮುಂಗಾರು ಮಳೆಗೆ ರಸ್ತೆ ಅಧೋಗತಿಯತ್ತ ಸಾಗಿರುವುದು ಮತ್ತೆ ಆತಂಕ ಹೆಚ್ಚುವಂತೆ ಮಾಡಿದೆ.
ರಸ್ತೆ ಕಳಪೆ ಮಟ್ಟದಿಂದ ಕೂಡಿದೆ ಎಂಬ ಆರೋಪದ ಬಗ್ಗೆ ಪರಿಶೀಲಿಸಲಾಗುವುದು. ಗುಣಮಟ್ಟ ಕಾಪಾಡಿಲ್ಲ ಎಂದಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಎಇಇ ಶರಣಯ್ಯ ಶಿರೂರಮಠ ತಿಳಿಸಿದರು.