ಕಲಬುರಗಿ: ಜಿಲ್ಲಾ ಪೊಲೀಸ್ ಹಾಗೂ ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಡಿಎಆರ್ ಮೈದಾನದಲ್ಲಿರುವ ಪೊಲೀಸ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸೇವೆಯನ್ನು ಸ್ಮರಿಸಲಾಯಿತು.
ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲೂ ಪ್ರಾಣದ ಹಂಗು ತೊರೆದು ವೈದ್ಯಕೀಯ ಸಿಬ್ಬಂದಿ ಜೊತೆ ಗೂಡಿ ಸಾರ್ವಜನಿಕರ ಸಂರಕ್ಷಣೆಗೆ ಶ್ರಮಿಸಿ, ಶಂಕಿತ ವ್ಯಕ್ತಿಗಳ ಸೋಂಕು ತಪಾಸಣೆ, ಕ್ವಾರಂಟೈನ್, ಪ್ರೈಮರಿ ಹಾಗೂ ಸೆಕೆಂಡರಿ ಸೋಂಕಿತರನ್ನು ಪತ್ತೆ ಹಚ್ಚುವುದು, ಹಾಟ್ ಸ್ಪಾಟ್, ಐಸೋಲೇಷನ್ ಕೇಂದ್ರ, ಕೋವಿಡ್ ಆಸ್ಪತ್ರೆಗಳಲ್ಲಿ ಹಗಲಿರುಳೆನ್ನದೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಪೊಲೀಸರ ಕಾರ್ಯವನ್ನು ಈ ವೇಳೆ ಶ್ಲಾಘಿಸಲಾಯಿತು. ಹಾಗೂ ಕರ್ತವ್ಯದ ವೇಳೆ ಸೋಂಕು ತಗುಲಿ ಮೃತಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ವೇಳೆ ನಗರ ಪೊಲೀಸ್ ಆಯುಕ್ತ ಎನ್ ಸತೀಶಕುಮಾರ್, ಎಸ್‌ಪಿ ಡಾ.ಸಿಮಿ ಮರಿಯಮ್ ಜಾಜ್೯, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.