ಕಲಬುರಗಿ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಇಂದು ನಸುಕಿನ ಜಾವ 5 ಗಂಟೆಗೆ ಡಿಸಿಪಿ ಆಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿತು. ಜೈಲಿನಿಂದ ಕೈದಿಗಳು ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್.ಚೇತನ್ ಮಾರ್ಗದರ್ಶನದಲ್ಲಿ ಡಿಸಿಪಿ ನೇತೃತ್ವದ 120 ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಜೈಲಿನ ಮೂಲೆ ಮೂಲೆ, ಪ್ರತಿ ಸೆಲ್ ಹಾಗೂ ಪ್ರತಿಯೊಬ್ಬ ಕೈದಿಯನ್ನು ಪೊಲೀಸರು ಜಾಲಾಡಿದ್ದಾರೆ.
ದಾಳಿಯಲ್ಲಿ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ. ಈ ಹಿಂದೆ ಜೈಲಿನ ಆವರಣದಲ್ಲಿ ಪತ್ತೆಯಾಗಿದ್ದ ಅನೇಕ ಮೊಬೈಲ್ ಫೋನ್‌ಗಳ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ 10 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಡಾ ರಂಗನಾಥ್ ತಿಳಿಸಿದ್ದಾರೆ.
ಧಮ್ಕಿ-ದೂರು ದಾಖಲು: ಆಳಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಧಮ್ಕಿ ರಾಜಕಾರಣ ಮುಂದುವರೆದಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದವರು ಬಿಜೆಪಿ ಕಾರ್ಯಕರ್ತರ ಮೇಲೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆಳಂದ ಶಾಸಕರ ಪುತ್ರ ಹರ್ಷಾನಂದ ಗುತ್ತೇದಾರ್ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ನಂತರ ಕೋರಳ್ಳಿಯ ಗುರುಗೌಡರ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದರು. ಈಗ ಬಿಜೆಪಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಸರದಿ ಪ್ರಾರಂಭವಾಗಿದೆ.
ಆಳಂದ ಶಾಸಕ ಸುಭಾಷ ಗುತ್ತೇದಾರ್ ಅವರ ಪುತ್ರ ಸಂತೋಷ ಗುತ್ತೇದಾರ್ ಕಾಂಗ್ರೆಸ್ ಅಭ್ಯರ್ಥಿ ಬಿ. ಆರ್.ಪಾಟೀಲ್ ಸಹೋದರನ ಪುತ್ರ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅಲ್ಲದೆ ಧಮ್ಕಿ ಆಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏ. 7ರಂದು ಆಳಂದ ಠಾಣೆಗೆ ದೂರು ಸಲ್ಲಿಸಿದ್ದರೂ, ಇಂದಿಗೂ ಸಂತೋಷ್ ಗುತ್ತೇದಾರ್ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದಾರೆ.
ಕೋರಳ್ಳಿಯ ಗುರು ಗೌಡರ ಮೇಲೆ ಶಾಸಕರ ಪುತ್ರ ದೂರು ಸಲ್ಲಿಸಿದ ಮರುಕ್ಷಣವೇ ಎಫ್‌ಐಆರ್ ದಾಖಲಿಸಿದ ಪೊಲೀಸರು ಪ್ರಕರಣದಲ್ಲಿ ಯಾಕೆ ಅಸಡ್ಡೆ ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಶಾಸಕರ ಪುತ್ರ ಸಂತೋಷ ಗುತ್ತೇದಾರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಆಳಂದ ಕಾಂಗ್ರೆಸ್ ಮುಖಂಡ ಗಣೇಶ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲು