ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕೋವಿಡ್ನಿಂದಾಗಿ ದೇಶಾದ್ಯಂತ ಕೋಟ್ಯಂತರ ಜನ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೊರೊನಾವನ್ನು ನಿಯಂತ್ರಣಕ್ಕೆ ತರುವುದು ಬಿಟ್ಟು ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಸಂಕಷ್ಟಕ್ಕೀಡಾದ ಜನರಿಗಿಂತ ರಾಮ ಮಂದಿರ ಮೋದಿಗೆ ಮುಖ್ಯವಾಗಿದೆ ಎಂದರು.
ಈಗಲಾದರೂ ಸರ್ಕಾರ ಎಚ್ಚೆತ್ತು ಜನರ ಸಮಸ್ಯೆಗೆ ಸ್ಪಂದಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಬಡ ಕುಟುಂಬಗಳಿಗೆ ತಿಂಗಳಿಗೆ ತಲಾ 7,500 ರೂಪಾಯಿ ನೀಡಬೇಕು. ಉದ್ಯೋಗ ಖಾತ್ರಿಯ ಕೂಲಿ ದರ ಹೆಚ್ಚಿಸಬೇಕು, ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಶೇ.3 ರಷ್ಟು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವುದು ಸೇರಿದಂತೆ 16 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 20 ರಿಂದ 29 ರವರೆಗೆ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ನಡೆಸುತ್ತಿರುವುದಾಗಿ ಮಾನ್ಪಡೆ ತಿಳಿಸಿದ್ದಾರೆ.