ಸೇಡಂ : ಕೊರೊನಾವನ್ನ ಸರಿಯಾದ ರೀತಿಯಲ್ಲಿ ನಿರ್ವಹಿಸದ ಕಾರಣ ಆಗುತ್ತಿರುವ ಅವ್ಯವಸ್ಥೆಯನ್ನ ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಮತ್ತು ಜಿಲ್ಲಾಡಳಿತ ವೈಫಲ್ಯದಿಂದ ದೊಡ್ಡ ಮಟ್ಟದ ಸಾವುಗಳಾಗುತ್ತಿವೆ.
ಮಾಹಿತಿ ಇದ್ದರೂ ಸಹ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ. ಎರಡನೇ ಅಲೆ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪಾಟೀಲ ಆರೋಪಿಸಿದರು.
ದಿನನಿತ್ಯ ಕಲಬುರಗಿ ಮತ್ತು ಸೇಡಂನಿಂದ ನೂರಾರು ಕರೆಗಳು ಬರುತ್ತಿವೆ. ಪ್ರಯತ್ನ ಮೀರಿ ಬೆಡ್ ಕೊಡಿಸಿದ್ದೇನೆ, ಸಾಧ್ಯವಾದಷ್ಟು ಜನರಿಗೆ ನೆರವಾಗುತ್ತಿದ್ದೇನೆ. ಆದರೆ, ಪರಿಸ್ಥಿತಿ ಕೈಮೀರಿದೆ. ನಾನೂ ಸಹ ಅಸಹಾಯಕನಾಗಿದ್ದೇನೆ ಎಂದ್ರು.
ಗ್ರಾಮೀಣ ಭಾಗದಲ್ಲೇ ಹೆಚ್ಚಿನ ಸೋಂಕಿತರು ಕಂಡು ಬರುತ್ತಿದ್ದಾರೆ. ಪಿಎಂ ಕೇರ್ ಅಡಿ ಪ್ರತಿ ತಾಲೂಕಿಗೆ 5-6 ವೆಂಟಿಲೇಟರ್ ನೀಡಲಾಗಿದೆ. ಬಹುತೇಕ ವೆಂಟಿಲೇಟರ್‌ಗಳು ಕಳಪೆ ಗುಣಮಟ್ಟದ್ದಾಗಿವೆ. ಇತ್ತೀಚೆಗೆ ಅಫಜಲಪುರದಿಂದ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ನೀಡಿದ ವೆಂಟಿಲೇಟರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ.
ಇನ್ನುಳಿದ ಕಡೆ ಇರುವ ವೆಂಟಿಲೇಟರ್‌ಗಳ ಬಳಕೆಯಾಗುತ್ತಿಲ್ಲ. ಇದೆಲ್ಲಾ ಯಾರ ಜವಾಬ್ದಾರಿ?, ಯಾರು ವ್ಯವಸ್ಥೆ ಸರಿಪಡಿಸೋರು? ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಗಾಳಿಯಲ್ಲಿ ಮಾತಾಡ್ತಿದ್ದಾರೆ. ಯಾವ 500 ಸಿಲಿಂಡರ್ ಬಂದಿಲ್ಲ. 2 ಲಕ್ಷ ರೆಮಿಡಿಸಿವಿರ್ ಬಂದಿಲ್ಲ. ಇದಕ್ಕಿಂತ ದೊಡ್ಡ ಎಮೆರ್ಜೆನ್ಸಿ ಇವರಿಗೇನಿದೆ?.
ಉಸ್ತುವಾರಿ ಸಚಿವರು 24 ಗಂಟೆ ಜಿಲ್ಲೆಯಲ್ಲೇ ಇದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಖುದ್ದು ಸಿಎಂ ಆದೇಶಿಸಿದ್ದಾರೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ನಿರಾಣಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ನನ್ನ ಅವಧಿಯಲ್ಲಿ ಕಲಬುರಗಿಯಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು 65 ಬೆಡ್ ಮಾಡಿ, ಆಕ್ಸಿಜನ್ ಪೈಪ್ಲೈನ್ ಸಹ ನೀಡಲಾಗಿತ್ತು. ಅದರ ಬಳಕೆಯಾಗ್ತಿಲ್ಲ.
ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗೆ ಖಾಸಗಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ರೆ, ಅವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂಬುದು ಸರ್ಕಾರದ ಸುತ್ತೋಲೆಯಲ್ಲಿದೆ. ಅದನ್ನು ಸಹ ಪಾಲಿಸುತ್ತಿಲ್ಲ ಎಂದು ಗುಡುಗಿದರು.
20 ಹೆಚ್ಚುವರಿ ಆಕ್ಸಿಜನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಕಲಬುರಗಿಯಲ್ಲಿ ಎರಡು ಆ್ಯಂಬುಲೆನ್ಸ್ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಸೇಡಂಗೂ ನೀಡಲಾಗುವುದು. ಕಡ್ಡಾಯವಾಗಿ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯಬೇಕು. ಅದರಿಂದ ಜೀವಕ್ಕೆ ಅಪಾಯವಿಲ್ಲ ಎಂದರು.