ಕಲಬುರಗಿ: ಏರುತ್ತಿರುವ ಬಿಸಿಲಿನ ತಾಪಕ್ಕೆ ಕಲಬುರಗಿ ಜನ ನಿಟ್ಟುಸಿರು ಬಿಡುವಂತಾಗಿದೆ. ಕಳೆದೊಂದು ತಿಂಗಳಿಂದ ಬಿಸಿಲಿನ ಪ್ರತಾಪ ತಾರಕಕ್ಕೇರಿದ್ದು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಂಪು ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ.
ಸೂರ್ಯನಗರಿ ಜನ ಬಿಸಿಲಿಗೆ ಬಸವಳಿದಿದ್ದಾರೆ. ಸೂರ್ಯನ ಶಾಖದಿಂದ ಪಾರಾಗಲು ತಂಪು ಪಾನೀಯ ಹಾಗೂ ತಂಪು ಪದಾರ್ಥಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಕಲ್ಲಂಗಡಿ ಹಣ್ಣಿಗಂತು ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.
ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ರಾಶಿ ಕಾಣುತ್ತಿವೆ. ರಸ್ತೆ ಪಕ್ಕ ತಳ್ಳುವ ಬಂಡಿಯಲ್ಲಿಟ್ಟು ಮಾರಾಟ ಮಾಡಲಾಗುತ್ತಿದೆ. ಹತ್ತು ರೂಪಾಯಿಗೆ ಪ್ಲೇಟ್ ಕಲ್ಲಂಗಡಿ ಹಣ್ಣು ತಿನ್ನಲು ಜನ ಕುಟುಂಬ ಸಮೇತ ಆಗಮಿಸಿ ಕಾದು ನಿಲ್ಲುತ್ತಿದ್ದಾರೆ. ಇನ್ನು ಕೆಲವರು ಹಣ್ಣನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದಾರೆ.
ಒಂದು ಕಲ್ಲಂಗಡಿ ಹಣ್ಣು 40 ರಿಂದ 100 ರೂಪಾಯಿವರೆಗೆ ಮಾರಾಟವಾಗುತ್ತಿದೆ. ನಗರದ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಹಾಗೂ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ವ್ಯಾಪಾರ ಜೋರಾಗಿದ್ದು. ನೀರು ಇಲ್ಲದಿರುವುದರಿಂದ ಬೆಳೆ ಕಡಿಮೆ ಬರುತ್ತಿದೆ ಆದರೆ ಬೇಡಿಕೆ ಹೆಚ್ಚಿದೆ ಎನ್ನುತ್ತಿದ್ದಾರೆ ಕಲ್ಲಂಗಡಿ ವ್ಯಾಪಾರಿಗಳು.