ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ವಕ್ಕರಿಸಿದ ಮಹಾಮಾರಿ ಕೊರೊನಾಗೆ ಹೆದರಿದ ಜನರು ಸ್ವತಃ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಪಾರಂಭಿಸಿದರು. ಸೋಂಕು ಹರಡುವ ಭೀತಿಯಲ್ಲಿ ಬಸ್ಗಳಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದರು. ಆದ್ರೀಗ ಇಂಧನ ಬೆಲೆ ಹೊಡೆತಕ್ಕೆ ತತ್ತರಿಸಿರುವ ಜನತೆ ನಗರ ಹಾಗು ಗ್ರಾಮೀಣ ಸಾರಿಗೆ ಬಸ್ನತ್ತ ಮುಖ ಮಾಡಿದ್ದಾರೆ.
ದಿನೇದಿನೆ ಏರಿಕೆ ಕಾಣುತ್ತಿರುವ ಇಂಧನ ಬೆಲೆ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ಸೋಂಕು ತಗುಲುವ ಭಯದಿಂದ ಬಸ್ ಹತ್ತಲು ಯೋಚಿಸುತ್ತಿದ್ದ ಅದೇ ಜನರೀಗ ಇಂಧನ ಬೆಲೆಗೆ ಹೆದರಿ ಸ್ವಂತ ವಾಹನದಲ್ಲಿ ಸಂಚರಿಸಲು ಯೋಚಿಸುವಂತಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾ ನಗರಗಳಲ್ಲಿ ಈಗಾಗಲೇ ನಗರ ಸಾರಿಗೆ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಲಕ್ಷಕ್ಕೆ ತಲುಪಿದ್ದು, 185 ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಜನರು ತಮ್ಮ ವಾಹನಗಳನ್ನು ಮನೆಯಲ್ಲಿಯೇ ಬಿಟ್ಟು ಸಾರಿಗೆ ಸಂಸ್ಥೆ ವಾಹನಗಳ ಮೊರೆ ಹೋಗಿರುವುದರಿಂದ ಸಾರಿಗೆ ಸಂಸ್ಥೆಯ ಉದ್ಯೋಗ ಹೆಚ್ಚಿದೆ.
ಕಲಬುರಗಿಯಲ್ಲಿ ಒಂದೊಂದು ಬಸ್ ನಿತ್ಯ ನಗರದಾದ್ಯಂತ ಸರಿಸುಮಾರು 8 ರಿಂದ 9 ಟ್ರಿಪ್ನಂತೆ 250 ರಿಂದ 300 ಕಿಲೋ ಮೀಟರ್ ಸಂಚಾರ ನಡೆಸುತ್ತಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು ಬಸ್ನಲ್ಲಿ ಸಂಚರಿಸುವುದು ಕೊಂಚ ಕಷ್ಟ ಎನಿಸುತ್ತಿದೆ. ಹಾಗಾಗಿ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡುವುದರ ಮೂಲಕ ಸ್ವಂತ ವಾಹನ ಉಪಯೋಗಿಸಲು ಅನುವು ಮಾಡಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್ನಿಂದ ಚೇತರಿಸಿಕೊಳ್ಳತ್ತಿದ್ದ ಜನರಿಗೆ ಇಂಧನ ಬೆಲೆ ಏರಿಕೆ ಹೊಡೆತ ಕೊಟ್ಟಿರುವುದಂತೂ ಮಾತ್ರ ಸುಳ್ಳಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸ್ವಂತ ವಾಹನಗಳ ಬಳಕೆ ಕಡಿಮೆಯಾಗಿದೆ. ನಗರ ಹಾಗೂ ಗ್ರಾಮೀಣ ಸಾರಿಗೆಯತ್ತ ಮುಖಮಾಡಿದ್ದಾರೆ.