ಕಲಬುರಗಿ: ರಾಜ್ಯ ಹಾಗೂ ಕೇಂದ್ರ ನಿವೃತ್ತಿ ನೌಕರರ ಪಿಂಚಣಿ ಸಮಸ್ಯೆ ಬಗೆಹರಿಸಲು ನಡೆಸಲಾದ ಪಿಂಚಣಿ ಅದಾಲತ್‍ಗಳಲ್ಲಿ ಸಲ್ಲಿಕೆಯಾದ 54 ಅರ್ಜಿಗಳ ಪೈಕಿ 4 ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿ, 45 ಪ್ರಕರಣಗಳನ್ನು ಒಂದು ವಾರದೊಳಗೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಬ್ಯಾಂಕ್ ಮತ್ತು ಖಜಾನಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಪಿಂಚಣಿ ಅದಾಲತ್ಅನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ನಂತರ ಪಿಂಚಣಿದಾರರ ಅಹವಾಲು ಸ್ವೀಕರಿಸಿದರು. ಅದಾಲತ್‍ನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ 5 ಅರ್ಜಿಗಳು ತಿರಸ್ಕತಗೊಂಡಿವೆ ಎಂದರು.
ಕಲಬುರಗಿಯ ಪ್ರಗತಿ ಕಾಲೋನಿ ನಿವಾಸಿ ಮಡಿವಾಳಪ್ಪ ಅವರು ಪರಿಷ್ಕೃತ ವೇತನ ಶ್ರೇಣಿಯಂತೆ ತಮಗೆ ಬ್ಯಾಂಕ್ನಿಂದ ಪಿಂಚಣಿ ಪಾವತಿಸುತ್ತಿಲ್ಲ ಎಂಬ ದೂರನ್ನು ಹೊತ್ತಿಕೊಂಡು ಬಂದಿದ್ದರು. ಅರ್ಜಿ ವಿಚಾರಣೆಗೆ ಎತ್ತಿಕೊಂಡ ಜಿಲ್ಲಾಧಿಕಾರಿಗಳು ಒಂದು ವಾರದೊಳಗೆ ಪರಿಷ್ಕೃತ ವೇತನದನ್ವಯ ಪಿಂಚಣಿ ಪಾವತಿಸುವಂತೆ ಎಸ್.ಬಿ.ಐ. ಓಂ ನಗರ ಶಾಖೆಯ ವ್ಯವಸ್ಥಾಪಕರಿಗೆ ನಿರ್ದೇಶಿಸಿದರು. ಏಪ್ರಿಲ್ ಮತ್ತು ಮೇ-2019 ಮಾಹೆಯ ಪಿಂಚಣಿ ಹಣ ಇನ್ನು ಕೈಸೇರಿಲ್ಲ ಎಂಬ ನಗರದ ಟಿಪ್ಪು ಸಲ್ತಾನ್ ಚೌಕ್ ನಿವಾಸಿ ಸೈಯ್ಯದ ಯೂಸುಫ್ ಅಲಿ ಅವರ ಅರ್ಜಿಯನ್ನು ಸಹ ಇತ್ಯರ್ಥಗೊಳಿಸಿ ಒಂದು ವಾರ ಕಾಲಮಿತಿ ನೀಡಿ ತಡೆ ಹಿಡಿಯಲಾದ ಹಣ ಪಿಂಚಣಿದಾರರಿಗೆ ಪಾವತಿಸುವಂತೆ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಖಜಾನಾಧಿಕಾರಿಗಳಾದ ವಿರುಪಾಕ್ಷಪ್ಪ, ದತ್ತಪ್ಪ ಗೊಬ್ಬೂರ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪಿಂಚಣಿದಾರರು ಭಾಗವಹಿಸಿದ್ದರು