ಯಾದಗಿರಿ/ ಕಲಬುರಗಿ: ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ವಿಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ 1200 ಕೋಟಿ ರೂ. ಮಧ್ಯಂತರ ಪರಿಹಾರ ನೀಡಿ ತಕ್ಕ ಉತ್ತರ ನೀಡಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕರ ವಿರುದ್ಧ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯ ನೆರೆ ಪೀಡಿತ ಪ್ರದೇಶ ವೀಕ್ಷಣೆಗೆ ಆಗಮಿಸಿ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿ ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಮುಂದೆಯೂ ಹೆಚ್ಚಿನ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನೀರಾವರಿ ಯೋಜನೆಗೆ ಸಾವಿರಾರು ಕೋಟಿ ನೀಡಿದ್ದೇನೆ ಎಂದು ಹೇಳಿದರು.
ತಮ್ಮ ತಂತಿ ಮೇಲಿನ ನಡಿಗೆ ಹೇಳಿಕೆಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಎಸ್ವೈ ತಿರುಗೇಟು ನೀಡಿದ್ದಾರೆ. ಅಧಿಕಾರ ಸಿಗದೆ ಇದ್ದ ಕಾರಣಕ್ಕೆ ಮತ್ತೆ ಅಧಿಕಾರದ ಆಸೆಯಿಂದ ಸಿದ್ದರಾಮಯ್ಯ ಹೀಗೆ ಟೀಕೆ-ಟಿಪ್ಪಣೆ ಮಾಡುತ್ತಿದ್ದಾರೆ. ತಮ್ಮ ಪಕ್ಷದ ಭಿನ್ನಾಭಿಪ್ರಾಯಗಳಲ್ಲಿ ಸಿದ್ದಾರಮಯ್ಯ ಸಿಕ್ಕಿಕೊಂಡಿದ್ದಾರೆ. ಟೀಕೆ ಮಾಡುವುದರಿಂದ ಅವರಿಗೆ ತೃಪ್ತಿ ಸಿಕ್ಕರೆ ಸಿಗಲಿ ಬಿಡಿ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಬರುವ 10,11ರಂದು ಅಧಿವೇಶನ ಕರೆದಿದ್ದೇವೆ. ಬಜೆಟ್‌ನಲ್ಲಿ ಅತಿವೃಷ್ಟಿ ಮಂಡನೆ ಮಾಡಿ ಅಗತ್ಯ ಕ್ರಮ ಜರುಗಿಸುವುದಾಗಿ ಸಿಎಂ ಹೇಳಿದರು. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮಾತನಾಡುವುದಿಲ್ಲ ಎಂದು ಜಾರಿಕೊಂಡ ಬಿಎಸ್ವೈ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಬಗ್ಗೆ ಮಾತನಾಡಲು ನಿರಾಕರಿಸಿದರು.
ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಸಿಎಂ ಯಡಿಯೂರಪ್ಪ ಇಂದು ಯಾದಗಿರಿಗೆ ಭೇಟಿ ನೀಡಿದ್ದಾರೆ. ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದ ರೈತರು ಸಿಎಂಗೆ ಮನವಿ ಸಲ್ಲಿಸಿದರು. ರೈತರ ಮನವಿ ಪಡೆದು ರಾಜನಕೊಳ್ಳೂರು ಕಡೆ ಸಿಎಂ ಹೊರಟಿದ್ದಾರೆ. ನಂತರ ಪ್ರವಾಹ ಪೀಡಿತ ಸುರಪುರ ತಾಲೂಕಿನ ತಿಂಥಣಿ, ದೇವಾಪುರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಪ್ರವಾಹದಿಂದ ಹಾನಿಯ ಸಂತ್ರಸ್ತರೊಂದಿಗೆ ಸಂವಾದ ಕೂಡಾ ನಡೆಸಲಿದ್ದಾರೆ. ಬಿಎಸ್‌ವೈಗೆ ಸಚಿವ ಪ್ರಭು ಚೌಹಾಣ್, ಶಾಸಕ ರಾಜುಗೌಡ ಸೇರಿ ಹಲವು ಮುಖಂಡರ ಸಾಥ್ ನೀಡಿದ್ದಾರೆ.