ಕಲಬುರಗಿ: ಕೊರೊನಾ ಹಿನ್ನಲೆ ರಾಜ್ಯ ಮಹಿಳಾ ವಸತಿ ನಿಲಯದ ಇಬ್ಬರು ಅನಾಥ ಹೆಣ್ಣು ಮಕ್ಕಳ ವಿವಾಹವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮುಂದಾಳತ್ವದಲ್ಲಿ ಸರಳವಾಗಿ ಜರುಗಿದೆ.
ಅಂಬಿಕಾ ಹಾಗೂ ಶಾರದಾಬಾಯಿ ಅವರ ವಿವಾಹವನ್ನು ಸರಳವಾಗಿ ಮಾಡಿಕೊಡಲಾಯಿತು. ಮಹಿಳಾ ನಿಲಯದ ನಿವಾಸಿ ಅಂಬಿಕಾ ಇವರ ವಿವಾಹ ಕಲಬುರಗಿ ಬಿದ್ದಾಪುರ ಕಾಲೋನಿಯ ಕಾವೇರಿ ಮತ್ತು ಕೇಶವರಾವ ಕುಲಕರ್ಣಿ ಇವರ ಜೇಷ್ಠ ಸುಪುತ್ರ ವೆಂಕಟೇಶ ಅವರೊಂದಿಗೆ ನಡೆಯಿತು. ಅದರಂತೆ ನಿಲಯದ ಇನ್ನೊರ್ವ ನಿವಾಸಿ ಶಾರದಾಬಾಯಿ ಇವರ ವಿವಾಹ ಅಫಜಲಪುರ ತಾಲೂಕಿನ ಬಾದನಳ್ಳಿಯ ಮಹಾನಂದಾ ಮತ್ತು ಭೀಮಾಶಂಕರ ಜಮಾದಾರ ಇವರ ಜೇಷ್ಠ ಸುಪುತ್ರ ಮಲಕಣ್ಣಾ ಇವರೊಂದಿಗೆ ನಡೆಯಿತು.
ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡುವ ಮೂಲಕ ಮದುವೆ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಗುಣಾರಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಡಾ. ವಿಜಯಲಕ್ಷ್ಮೀ ಹೇರೂರು, ವಿವಾಹ ನೋಂದಣಾಧಿಕಾರಿ ಪರಸಪ್ಪ, ನಿಲಯದ ಸಿಬ್ಬಂದಿಯಾದ ರೇಣುಕಾ ಗೃಹಮಾತೆ, ಪಾಟೀಲ ಕೊಳೆಗೇರಿ, ವರನ ಪಾಲಕರು, ಸಾಕ್ಷಿದಾರರು ಉಪಸ್ಥಿತರಿದ್ದರು.