ಕಲಬುರಗಿ : ಬುರ್ಕಾ ಮತ್ತು ಹಿಜಾಬ್ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಅವರ ಪ್ರಚೋದನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಮುಕ್ರಂಖಾನ್ ವಿರುದ್ಧ ಕೇವಲ ಎಫ್ಐಆರ್ ದಾಖಲಿಸಲಾಗಿದೆ. ಆತನ ಬಂಧನವಾಗಬೇಕು. ನಾವು ಮುಕ್ರಂ ಖಾಖ್ ಮನೆಗೆ ಹೋಗ್ತೇವೆ. ಅವರು ನಮ್ಮನ್ನು ಕತ್ತರಿಸಲಿ ನೋಡೋಣ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಹೇಳಿಕೆ ವಿರೋಧಿಸಿ, ಅವರ ಮನೆಗೆ ತೆರಳುತ್ತಿದ್ದ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಶಿವಾಚಾರ್ಯರ ನೇತೃತ್ವದ ತಂಡವನ್ನು ಪೊಲೀಸರು ಮಾರ್ಗಮಧ್ಯೆ ತಡೆದು ನಿಲ್ಲಿಸಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ ಸ್ವಾಗತಕ್ಕಾಗಿ ನೂರಾರು ಕಾರ್ಯಕರ್ತರು ನೀಲಹಳ್ಳಿ ಕ್ರಾಸ್ ಬಳಿ ಜಮಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನೀಲಹಳ್ಳಿ ಕ್ರಾಸ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಹಾರಾಷ್ಟ್ರ-ಕರ್ನಾಟಕ-ತೆಲಂಗಾಣ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಗಲಾಟೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾಲು ಸಾಲಾಗಿ ವಾಹನಗಳು ನಿಂತಿರುವ ದೃಶ್ಯ ಕಂಡು ಬಂದಿದೆ.
ಇದನ್ನೂ ಓದಿ: ಗೃಹ ಸಚಿವರ ಭೇಟಿಯಾದ ಕೈ ಮುಸ್ಲಿಂ ಶಾಸಕರು: ಹಿಜಾಬ್, ಶಾಲು ಸಂಘರ್ಷ ಸಂಬಂಧ ತನಿಖೆಗೆ ಮನವಿ
24 ಗಂಟೆಯಲ್ಲಿ ಬಂಧನದ ಭರವಸೆ : 24 ಗಂಟೆಯ ಒಳಗೆ ಮುಕ್ರಂಖಾನ್ ಬಂಧಿಸುವ ಭರವಸೆಯನ್ನ ಕಲಬುರಗಿ ಎಸ್‌ಪಿ ಇಶಾ ಪಂತ್ ನೀಡಿದ್ದಾರೆ. ಹೀಗಾಗಿ, ಶ್ರೀರಾಮ ಸೇನೆಯ ಪ್ರತಿಭಟನೆ ತಾತ್ಕಾಲಿಕ ಮೋಟಕುಗೊಳಿಸಿದ್ದಾರೆ. 24 ಗಂಟೆಯಲ್ಲಿ ಬಂಧನವಾಗದೆ ಇದ್ರೆ ಮತ್ತೆ ಸೇಡಂ ಚಲೋ ಹೋರಾಟ ಗ್ಯಾರಂಟಿ, ಪೊಲೀಸ್, ಮಿಲಿಟರಿ ಬಂದ್ರೂ ಬಿಡೋದಿಲ್ಲ ಅಂತಾ ಸ್ವಾಮೀಜಿ ಎಚ್ಚರಿಸಿದ್ದಾರೆ.